More

    ವಿದ್ಯಾವಂತರಿಂದ ಮಾನವೀಯ ಮೌಲ್ಯ ಹರಣ

    ಬಾಳೆಹೊನ್ನೂರು: ಮಕ್ಕಳಿಗೆ ಜಾತಿ, ಧರ್ಮ ತಾರತಮ್ಯದ ಬಗ್ಗೆ ಕಲಿಸದೆ ಮಾನವೀಯ ಮೌಲ್ಯಗಳನ್ನು ಹೇಳಿಕೊಡುವ ಅಗತ್ಯವಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

    ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಭಾನುವಾರ ಆಯೋಜಿಸಿದ್ದ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮೌಲ್ಯಗಳನ್ನು ನಾವು ಹೇಗೆ ಬೆಳೆಸಬೇಕು? ಇಂದಿನ ವ್ಯವಸ್ಥೆಯನ್ನು ಯಾರು ಹಾಳುಮಾಡುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
    1947ರಲ್ಲಿ ದೇಶದ ಸಾಕ್ಷರತೆ ಪ್ರಮಾಣ ಶೇ.6ರಿಂದ 16 ಇತ್ತು. ಆಗ ಸಮಾಜದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆ ಇತ್ತು. ಜನ ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳುತ್ತಿದ್ದರು. ಪ್ರಸ್ತುತ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.80ರಷ್ಟು ಇದ್ದರೂ ಕೊಲೆ, ಕಳ್ಳತನ, ಮಾನವೀಯ ಮೌಲ್ಯಗಳ ಹರಣವಾಗುತ್ತಿದೆ. ಇವುಗಳನ್ನು ವಿದ್ಯಾವಂತರೇ ಮಾಡುತ್ತಿದ್ದಾರೆ ಎಂಬುದು ಬೇಸರದ ಸಂಗತಿ ಎಂದರು.
    ಜನರನ್ನು ಒಗ್ಗೂಡಿಸಿಕೊಂಡು ಹೋಗುವ ವಿಚಾರಧಾರೆಗಳು ನಡೆಯಬೇಕು. ಮುಂದಿನ ಸಮುದಾಯವನ್ನು ಹೇಗೆ ಬೆಳೆಸಬೇಕು ಎಂಬ ಬಗ್ಗೆ ನಾವು ಯೋಚಿಸಬೇಕು. ಕೇವಲ ಹಣ ಮಾಡುವುದು ಮನುಷ್ಯನ ಗುರಿಯಾಗಬಾರದು. ಮನುಷ್ಯನ ಬದುಕಿಗೆ ಹಣ ಒಂದು ಸಾಧನ ಮಾತ್ರ. ಮೌಲ್ಯಗಳು ಎಲ್ಲಿಂದಲೂ ಬಂದಿಲ್ಲ. ಅವು ಮಾನವ ಸೃಷ್ಟಿ. ಮೌಲ್ಯಗಳನ್ನು ನಾವೇ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
    ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಘ, ಸಂಸ್ಥೆಗಳ ಸೌಲಭ್ಯ ದೊರಕಬೇಕು ಎಂಬುದು ಸಂಸ್ಥೆಯ ಆಶಯ. ಜಗತ್ತಿನಲ್ಲಿ ವಿಶ್ವಾಸ ನಿರ್ಮಿಸುವುದು ಸಂಸ್ಥೆ ಗುರಿ. ನಾವು ಮಾಡುವ ಕಾರ್ಯಗಳ ಬಗ್ಗೆ ಜನರಲ್ಲಿ ನಂಬಿಕೆ ಬಂದಾಗ ಸಂಘ ಸಂಸ್ಥೆಗಳಿಗೆ ಸಹಕಾರ ದೊರೆಯುತ್ತದೆ. ಈ ಬಾರಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.
    ರೋಟರಿ ನೂತನ ಅಧ್ಯಕ್ಷ ಎ.ಆರ್.ಸುರೇಂದ್ರ, ಇನ್ನರ್‌ವ್ಹೀಲ್ ನೂತನ ಅಧ್ಯಕ್ಷೆ ಮೇನಕಾ ಜಯಪ್ರಕಾಶ್ ಅಧಿಕಾರ ಸ್ವೀಕರಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಜೆ.ಎಂ.ಶ್ರೀಹರ್ಷ, ವಲಯ ಸೇನಾನಿ ಕಿರಣ್ ಶೆಟ್ಟಿ, ನಿರ್ಗಮಿತ ಅಧ್ಯಕ್ಷ ಕೆ.ಎ.ವಿವೇಕ್, ಕಾರ್ಯದರ್ಶಿ ಎಂ.ಸಿ.ಐಶ್ವರ್ಯಾ, ಇನ್ನರ್‌ವ್ಹೀಲ್ ನಿರ್ಗಮಿತ ಅಧ್ಯಕ್ಷೆ ಸುಚಿತಾ ಹೆಗ್ಡೆ, ಯಶವಂತ್, ಶಿಲ್ಪಾ, ಕಾಂಚನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts