

ಬೇಲೂರು: ಮನುಷ್ಯ ತನ್ನ ವೈಯಕ್ತಿಕ ಲಾಭಕ್ಕೆ ಭೂಮಿಯ ಮೇಲೆ ನಿರಂತರ ಒತ್ತಡ ಹಾಕುತ್ತಿರುವುದರಿಂದ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಇದನ್ನು ತಪ್ಪಿಸಿ ಪರಿಸರ ಉಳಿವಿಗೆ ಎಲ್ಲರೂ ಮುಂದಾಗಬೇಕು ಎಂದು ಭಾರತ ಸೇವಾ ದಳದ ತಾಲೂಕು ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜಣ್ಣ ಹೇಳಿದರು.
ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರೀನರಿ ಟ್ರಸ್ಟ್, ಭಾರತ ಸೇವಾ ದಳ, ವಿವೇಕಾನಂದ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದರು. ಪ್ರಕೃತಿ ನಾಶದಿಂದ ಉಷ್ಣಾಂಶ ಹೆಚ್ಚಾಗಿ ಸಾಕಷ್ಟು ನೋವು ಅನುಭವಿಸುತ್ತಿದ್ದೇವೆ. ಪರಿಸರ ನಮಗೆ ಎಲ್ಲವನ್ನು ಕೊಟ್ಟಿದೆ. ಆದರೆ, ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು, ನೀರು ಸೇರಿದಂತೆ ಪ್ರಕೃತಿಯನ್ನು ಕೊಡುಗೆಯಾಗಿ ಕೊಡಬೇಕು. ಇಲ್ಲದಿದ್ದಲ್ಲಿ ಪರಿಸರದೊಂದಿಗೆ ನಾವು ಸಹ ನಾಶವಾಗಬೇಕಾಗುತ್ತದೆ. ಹಾಗಾಗಿ ಎಲ್ಲರೂ ಪರಿಸರ ಉಳಿವಿಗೆ ಕಂಕಣ ಬದ್ಧರಾಗಬೇಕು ಎಂದರು.
ಗ್ರೀನರಿ ಟ್ರಸ್ಟ್ ಅಧ್ಯಕ್ಷ ಗಿರೀಶ್ ಮಾತನಾಡಿ, ಪರಿಸರ ದಿನವನ್ನು ಗಿಡ ನೆಟ್ಟು ಒಂದು ದಿನಕ್ಕೆ ಸೀಮಿತ ಮಾಡದೆ ದಿನನಿತ್ಯ ಪರಿಸರ ಉಳಿಸುವ ಕೆಲಸವಾಗಬೇಕು. ಮಕ್ಕಳು ತಮ್ಮ ಗ್ರಾಮ ಹಾಗೂ ಎಲ್ಲೆಲ್ಲಿ ಸ್ಥಳಾವಕಾಶ ಸಿಗುತ್ತದೆಯೋ ಅಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್, ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ, ಭಾರತ ಸೇವಾ ದಳದ ಸಂಚಾಲಕಿ ರಾಣಿ, ಗ್ರೀನರಿ ಟ್ರಸ್ಟ್‌ನ ಪರಮೇಶ್, ರಿಜ್ವಾನ್, ವಿವೇಕಾನಂದ ಕಾಲೇಜು ಪ್ರಾಂಶುಪಾಲ ಶಿವಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಗಂಗೇಗೌಡ, ಉಪನ್ಯಾಸಕರಾದ ಪ್ರಕಾಶ್, ಜ್ಞಾನಚಂದ್ರ, ಗುರುಮೂರ್ತಿ, ಶಿಕ್ಷಕರು ಇದ್ದರು.