ಮೀನು ಒಣಗಿಸಲು ಹೈಟೆಕ್ ತಂತ್ರಜ್ಞಾನ

21gkn4=a-
Published on

ಕಾರವಾರ: ಸೋಲಾರ್ ಯಂತ್ರಗಳ ಮೂಲಕ ಆಧುನಿಕ ತಂತ್ರಜ್ಞಾನದಲ್ಲಿ ಮೀನು ಒಣಗಿಸುವ ತರಬೇತಿಯನ್ನು ಕಾರವಾರ ಮೀನುಗಾರರಿಗೆ ನೀಡಲಾಗುವುದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಕಾರವಾರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪ್ರಾಧಿಕಾರದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಆತ್ಮ ನಿರ್ಭರ ಕಾರ್ಯಕ್ರಮದಡಿ ಸ್ವ ಉದ್ಯೋಗ ತರಬೇತಿ ನೀಡುತ್ತಿದ್ದೇವೆ. ಅದರಲ್ಲಿ ಒಣ ಮೀನು ತಯಾರಿಸುವ ಆಧುನಿಕ ವಿಧಾನದ ಬಗ್ಗೆ ಮಂಗಳೂರು, ಉಡುಪಿಯಲ್ಲಿ ಈಗಾಗಲೇ ಯಶಸ್ವಿ ತರಬೇತಿ ನೀಡಲಾಗಿದೆ. ಈಗ ಸಾಂಪ್ರದಾಯಿಕ ಪದ್ಧತಿಯಲ್ಲಿ ಒಣಗಿಸುವ ಮೀನು ಬೇಗ ಹಾಳಾಗುತ್ತದೆ. ಆಧುನಿಕ ತಂತ್ರಜ್ಞಾನದಲ್ಲಿ ಸೋಲಾರ್ ಮೂಲಕ ಮೀನು ಸಂಸ್ಕರಿಸಿದಲ್ಲಿ ವಿದೇಶಕ್ಕೆ ರಫ್ತು ಮಾಡಲೂ ಅವಕಾಶವಿದೆ ಎಂದರು.

ಕಾರವಾರ ಮಾಜಾಳಿಯಿಂದ ಕೇರಳ ಕಾಸರಕೋಡಿನವರೆಗೆ 320 ಕಿಮೀ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆ ಮಾಡುವ ಎರಡು ವರ್ಷದ ಯೋಜನೆಗೆ ಮರು ಜೀವ ಬಂದಿದೆ. 1200 ಕೋಟಿ ರೂಪಾಯಿ ವೆಚ್ಚದ ಡಿಪಿಆರ್ ಸಿದ್ಧಮಾಡಲಾಗುತ್ತದೆ ಎಂದರು. ಹೆದ್ದಾರಿ ನಡುವೆ ‘ಪಿಂಕ್​ಸಿಟಿ’ ಎಂಬ ಗಿಡ ಬೆಳೆಯಲು ಯೋಜನೆ ರೂಪಿಸಿದ್ದೇವೆ. ಇದು ಹೆದ್ದಾರಿಯ ಸೌಂದರ್ಯ ಹೆಚ್ಚಿಸುವ ಜತೆ ಆದಾಯವೂ ಬರಲಿದೆ. ಗಿಡದಲ್ಲಿ ಹಳದಿ ಹೂವು ಬಿಡಲಿದ್ದು, ಮೆಣಸು ಕಾಳಿನ ಸ್ವರೂಪದ ಕಾಳು ಬಿಡಲಿದೆ. ಅದನ್ನು ಕೊಯ್ದು ಆದಾಯ ಗಳಿಸಬಹುದು. ಯೋಜನೆಗೆ ಹೆದ್ದಾರಿ ಪ್ರಾಧಿಕಾರದ ಅನುಮತಿ ಬೇಕಿದೆ ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯಾಗಿ ಮಾರ್ಪಡಿಸುವ ಪ್ರಯತ್ನ ನಡೆದಿದೆ ಎಂದರು.

ಮಾದನಗೇರಿ ಮಾರುಕಟ್ಟೆ ಶೀಘ್ರ ಹಸ್ತಾಂತರ: ಗೋಕರ್ಣದಲ್ಲಿ ಹೊಸ ಮೀನು ಮಾರುಕಟ್ಟೆ ಮಾಡಲು ಜಾಗ ಗುರುತಿಸಲಾಗಿದ್ದು, ಸ್ಥಳ ಪರಿಶೀಲನೆ ಮಾಡಲಾಗಿದೆ. ಮಾದನಗೇರಿಯಲ್ಲಿ ಎರಡು ಗ್ರಾಪಂ ಹಾಗೂ ತಾಲೂಕುಗಳ ಗಡಿಯಲ್ಲಿ ಮೀನು ಮಾರುಕಟ್ಟೆ ನಿರ್ವಣವಾಗಿದ್ದರಿಂದ ಉದ್ಘಾಟನೆಗೆ ಸಮಸ್ಯೆಯಾಗಿದೆ. ಸದ್ಯವೇ ಸಂಬಂಧಪಟ್ಟ ಎರಡೂ ಗ್ರಾಪಂಗಳಿಗೆ ಪತ್ರ ಬರೆಯಲು ಸೂಚಿಸಲಾಗಿದೆ. ಅವರ ಅಭಿಪ್ರಾಯ ಪಡೆದು ನಂತರ ಮಾರುಕಟ್ಟೆಯನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.

ಮಚ್ಚಳ್ಳಿ ರಸ್ತೆ ಅಭಿವೃದ್ಧಿ: ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮಚ್ಚಳ್ಳಿ ಕುಗ್ರಾಮಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆದು ರಸ್ತೆ ನಿರ್ವಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ರತ್ನಾಕರ ಹೆಗ್ಡೆ ಭರವಸೆ ನೀಡಿದರು. ಗ್ರಾಮದ ರಸ್ತೆ ಪರಿಶೀಲನೆ ನಡೆಸಿದ್ದೇನೆ. ಗ್ರಾಮಕ್ಕೆ ತೆರಳುವ 7 ಕಿಮೀ ಕಚ್ಚಾ ರಸ್ತೆಯಲ್ಲಿ 3 ಕಿಮೀ ರಸ್ತೆಯನ್ನು ಶಾಸಕಿ ರೂಪಾಲಿ ನಾಯ್ಕ ಮಾಡಿಸಿದ್ದಾರೆ. ಇನ್ನು 4 ಕಿಮೀ ರಸ್ತೆಗೆ ಲೋಕೋಪಯೋಗಿ ಇಲಾಖೆಯು 14 ಕೋಟಿ ರೂಪಾಯಿಗಳ ವಿಸ್ತ್ರತ ಯೋಜನಾ ವರದಿ ತಯಾರಿಸಿದೆ. ಅನುದಾನ ತಂದರೂ ಅರಣ್ಯ ಇಲಾಖೆಯ ಆಕ್ಷೇಪ ಇರುವುದರಿಂದ ಅರಣ್ಯ ಅನುಮತಿ ಪಡೆದು ರಸ್ತೆ ನಿರ್ವಣಕ್ಕೆ ಪ್ರಯತ್ನಿಸಲಾಗುವುದು ಎಂದರು. ಶಾಸಕಿ ರೂಪಾಲಿ ನಾಯ್ಕ, ಸದಸ್ಯರಾದ ವಿಜಯಕುಮಾರ ನಾಯ್ಕ, ಮಂಜುನಾಥ ಜನ್ನು, ಕಾರ್ಯದರ್ಶಿ ಪ್ರದೀಪ ಡಿಸೋಜಾ, ಜಿಪಂ ಸಿಇಒ ಪ್ರಿಯಾಂಗಾ ಎಂ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net