

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಇ.ಇ ಮತ್ತು ನೀಟ್ನಲ್ಲಿ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರಥಮ ಪಿಯುಸಿ ತರಗತಿ ಆರಂಭಗೊಂಡಿತು.
ಭೌತಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ರಮೇಶ್ ಹಂದೆ ಉದ್ಘಾಟಿಸಿ ಮಾತನಾಡಿ, ಕಾಲೇಜಿನಲ್ಲಿ ಆರಂಭವಾಗುತ್ತಿರುವ ತರಗತಿಗೆ ಸೇರಿರುವ ವಿದ್ಯಾರ್ಥಿಗಳಿಗೆ ದೊಡ್ಡ ನಗರಗಳಲ್ಲಿ ಸಿಗುವಂಥ ಶಿಕ್ಷಣ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಮೀಣ ಪ್ರದೇಶವಾದ ಹೆಬ್ರಿಯ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ದೊರೆಯುತ್ತಿದೆ. ಅವಕಾಶ ಚೆನ್ನಾಗಿ ಬಳಸಿಕೊಂಡು, ಜೀವನದಲ್ಲಿ ಉನ್ನತ ಸ್ಥಾನಮಾನಗಳಿಗೆ ತಲುಪಿ ಎಂದರು.
ಪ್ರಾಂಶುಪಾಲ ಅಮರೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಿಸಬೇಕಾದರೆ ಬಹಳಷ್ಟು ಹೋರಾಟ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಮೃತ ಭಾರತಿ ನಾಲ್ಕು ವರ್ಷಗಳಿಂದ ವಿಶೇಷ ಇಂಟಿಗ್ರೇಟೆಡ್ ತರಗತಿ ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕ ಸುದರ್ಶನ್ ಶೆಟ್ಟಿ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿಗಳಾದ ಸುತೇಜ ಸ್ವಾಗತಿಸಿದರು. ಅನ್ನಪೂರ್ಣ ನಿರೂಪಿಸಿದರು.