ಅಧಿಕ ಲಾಭ ತಂದುಕೊಟ್ಟ ನರ್ಸರಿ

ಅಧಿಕ ಲಾಭ ತಂದುಕೊಟ್ಟ ನರ್ಸರಿ
Published on

ಡಿ.ಪಿ. ಮಹೇಶ್ ಯಳಂದೂರು
ಐದು ಎಕರೆ ಜಮೀನಿನಲ್ಲಿ ವಿಭಿನ್ನ ರೀತಿಯಲ್ಲಿ ಬೇಸಾಯ ಮಾಡುವ ಮೂಲಕ ತಾಲೂಕಿನ ವಡಗೆರೆ ಗ್ರಾಮದ ರೈತ ಎಂ. ರೇವಣ್ಣ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.

ತಮ್ಮ 1 ಎಕರೆ 20 ಗುಂಟೆ ಜಮೀನಿನಲ್ಲಿ ನರ್ಸರಿ ಮಾಡಿ ಆದಾಯ ಮೂಲ ಕಂಡುಕೊಂಡಿದ್ದಾರೆ. ತೆಂಗು, ಅಡಕೆ, ಪೇರಲೆ, ಮಾವು, ಚೆಂಡು ಹೂವು, ಟೊಮ್ಯಾಟೋ, ಸಪೋಟ, ಮೆಣಸು, ವಿವಿಧ ತರಕಾರಿಗಳು, ಹಣ್ಣಿನ ಗಿಡಗಳನ್ನು ಬೆಳೆದು ಮಾರಾಟ ಮಾಡುತ್ತಾರೆ. ಜಿಲ್ಲೆಯ ಯಳಂದೂರು, ಹನೂರು, ಗುಂಡ್ಲುಪೇಟೆ, ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಯಿಂದ ರೈತರು ಆಗಮಿಸಿ ಗಿಡಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ತಿಂಗಳಿಗೆ 25ರಿಂದ 30 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.

ನಿರಂತರ ಆದಾಯ ನೀಡುವ ಪನ್ನೀರ್ ಎಲೆ
ಅರ್ಧ ಎಕರೆ ಜಮೀನಿನಲ್ಲಿ ಪನ್ನೀರ್ ಎಲೆಯನ್ನು ಬೆಳೆಯಲಾಗುತ್ತಿದೆ. ಇದರಿಂದ ನಿರಂತರ ಆದಾಯ ಬರುತ್ತಿದ್ದು, ಕೃಷಿಗೆ ಬೇಕಾಗುವ ನಿತ್ಯದ ಖರ್ಚನ್ನು ಇದರಿಂದಲೇ ಸರಿದೂಗಿಸಲಾಗುತ್ತಿದೆ. ಸುವಾಸಿತ ಈ ಎಲೆಯನ್ನು ಹಾರ ಹಾಗೂ ಹೂವಿನ ದಿಂಡು ಕಟ್ಟಲು ಬಳಸುತ್ತಾರೆ. ಪನ್ನೀರ್ ಎಲೆಯನ್ನು ಕೊಳ್ಳೇಗಾಲ ಪಟ್ಟಣಕ್ಕೆ ಕಳುಹಿಸಲಾಗುತ್ತದೆ. ಕೆಜಿಗೆ ರೂ. 60 ರಂತೆ ಮಾರಾಟ ಮಾಡಲಾಗುತ್ತಿದೆ. ಅರ್ಧ ಎಕರೆಯಲ್ಲಿ ಪ್ರತಿನಿತ್ಯ 20 ರಿಂದ 25 ಕೆಜಿ ಎಲೆ ಲಭಿಸುತ್ತಿದೆ. ಪ್ರತಿ ದಿನ 1500 ರೂ. ಪನ್ನೀರ್ ಎಲೆಯಿಂದ ಗಳಿಕೆಯಾಗುತ್ತಿದೆ. ಜತೆಗೆ ಮೂರು ಎಕರೆ ಜಮೀನಿನಲ್ಲಿ ವಾಣಿಜ್ಯ ಬೆಳೆಯಾಗಿ ಬಾಳೆ, ತೆಂಗು ಬೆಳೆದು ಇದರಿಂದಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಸರ್ಕಾರಿ ಶಾಲೆ, ಕಚೇರಿಗೆ ಉಚಿತ ಗಿಡ
ತಿಪಟೂರು, ಹರದನಹಳ್ಳಿ, ಚಂದಕವಾಡಿ ಗ್ರಾಮಗಳಿಂದ ತೆಂಗಿನ ತರಳುಗಳನ್ನು ತಂದು ನರ್ಸರಿಯಲ್ಲಿ ಬೆಳೆಸಲಾಗುತ್ತಿದೆ. ಹೆಚ್ಚಾಗಿ ದೇಶೀಯ ತಳಿಗಳನ್ನು ಬೆಳೆಸಲಾಗುತ್ತಿದೆ. ದೇಶೀಯ ತಳಿಯ ಮರಗಳಿಗೆ ಆಯಸ್ಸು ಹೆಚ್ಚಿರುವುದರ ಇಳುವರಿಯೂ ಹೆಚ್ಚಾಗಿರುತ್ತದೆ. ಹೈಬ್ರೀಡ್ ತಳಿಗಳನ್ನು ಕೇಳುವ ರೈತರಿಗೆ ಕೋಲಾರ ಹಾಗೂ ಕೃಷ್ಣಗಿರಿಯಿಂದ ತೆಂಗಿನ ತರಳುಗಳನ್ನು ತಂದು ಬೆಳೆಸಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಚೇರಿಗಳ ಆವರಣದಲ್ಲಿ ತೆಂಗಿನ ಗಿಡಗಳನ್ನು ಬೆಳೆಸಲು ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಶಾಲೆ ಅಥವಾ ಕಚೇರಿಯಿಂದ ಪತ್ರ ತರಬೇಕಿದೆ.

ತಂದೆಯ ಮಾರ್ಗದರ್ಶನ
ನಮ್ಮ ತಂದೆ ಮರಿಸ್ವಾಮಿ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಇವರು ಕೃಷಿ ಬಗ್ಗೆ ಹೇಳುತ್ತಿದ್ದ ಪಾಠ ಇಂದು ಸ್ಫೂರ್ತಿಯಾಗಿದೆ. 2012ರವರೆಗೆ ಕಟ್ಟಡ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದವು. ಆ ಕೆಲಸ ಕೈ ಹಿಡಿಯದ ಕಾರಣ ಕೃಷಿಗೆ ಮರಳಬೇಕಾಯಿತು. ನಂತರ ತಂದೆಯ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದೇನೆ ಎನ್ನುತ್ತಾರೆ ರೈತ ರೇವಣ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net