

ಚಳ್ಳಕೆರೆ: ಮಂತ್ರಿಗಿರಿ ಸಿಗಲಿಲ್ಲ ಎನ್ನುವ ಬೇಸರ ಇಲ್ಲ. ಈ ಆಡಳಿತದಲ್ಲಿ ಉನ್ನತ ಸ್ಥಾನ ದೊರೆಯುವ ನಿರೀಕ್ಷೆ, ವಿಶ್ವಾಸ ಇದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಬೆಂಗಳೂರಿನ ಶಾಸಕರ ಭವನದಲ್ಲಿ ಚಳ್ಳಕೆರೆ ಕ್ಷೇತ್ರದ ವಿವಿಧ ಸಂಘಟನೆ ಸದಸ್ಯರು, ಬೆಂಬಲಿಗರು, ಕಾರ್ಯಕರ್ತರಿಂದ ಗೌರವ ಸ್ವೀಕರಿಸಿ ಮಾತನಾಡಿದರು.
ಮೂರನೇ ಬಾರಿಗೆ ಗೆಲುವು ಸಾಧಿಸಿದ ನನಗೆ ಮಂತ್ರಿಗಿರಿಗಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಕಳೆದ ಅವಧಿಯಲ್ಲಿ 2 ವರ್ಷ ಕರೊನಾ ಸೋಂಕು, ಜತೆಗೆ ಬಿಜೆಪಿ ಸರ್ಕಾರ ನಿರೀಕ್ಷಿತ ಅನುದಾನ ನೀಡದೆ ಅಭಿವೃದ್ಧಿ ಕಾರ್ಯ ಕುಂಠಿತವಾಯಿತು.
ನಗರದಲ್ಲಿ ಯುಜಿಡಿ, ರಾಜಕಾಲುವೆ ದುರಸ್ತಿ ಕಾರ್ಯ, ನಗರಸಭೆ ಕಟ್ಟಡ, ರಸ್ತೆಗಳ ವಿಸ್ತರಣೆ ಕಾರ್ಯ ಸೇರಿ ಕೆಲ ಕೆಲಸಗಳು ಅರ್ಧಕ್ಕೆ ನಿಂತಿದ್ದು, ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದರು.
ಮೆಡಿಕಲ್ ಕಾಲೇಜು ಆರಂಭ
ನಗರದ ಸರ್ಕಾರಿ ಆಸ್ಪತ್ರೆ ಬಡಜನರಿಗೆ ಅನುಕೂಲವಾಗಬೇಕು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಸಿಗೆ, ಎಕ್ಸ್‌ರೇ ವ್ಯವಸ್ಥೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು ಆರಂಭದಿಂದ ಸ್ಥಳೀಯ ಆಸ್ಪತ್ರೆಗೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ವ್ಯವಸ್ಥೆ ದೊರೆಯಲಿದೆ ಎಂದರು.
ಚುನಾವಣೆ ಸಮಯದಲ್ಲಿ ವಿರೋಧ ಪಕ್ಷದವರು ಏನೆಲ್ಲ ಆರೋಪ ಮಾಡಿದರೂ, ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಗೆಲುವು ನೀಡಿದ್ದಾರೆ.
ಜನರ ವಿಶ್ವಾಸದಂತೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮುಂದುವರಿಸಲಾಗುವುದು ಎಂದರು.
ಗ್ಯಾರಂಟಿ ಪಕ್ಕಾ
ಪಕ್ಷ ಘೋಷಿಸಿದ ಗ್ಯಾರಂಟಿಗಳನ್ನು ಜಾರಿ ಮಾಡಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅಗತ್ಯ ಮಾಹಿತಿ ಸಂಗ್ರಹಕ್ಕೆ ಇಲಾಖೆವಾರು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜುಲೈ ತಿಂಗಳಲ್ಲಿ ಬಜೆಟ್ ಮಂಡನೆ ಆಗಲಿದೆ. ಗ್ಯಾರಂಟಿಗಳ ನಿರ್ವಹಣೆಗೆ ವಾರ್ಷಿಕವಾಗಿ 80 ಸಾವಿರ ಕೋಟಿ ರೂ. ಬೇಕಿದೆ ಎಂದರು.
ಜಾತಿ-ಪ್ರಾದೇಶಿಕ ಆದ್ಯತೆ
ಈ ಬಾರಿ ಗೆಲುವು ಸಾಧಿಸಿರುವ ಶಾಸಕರಲ್ಲಿ ಬಹಳಷ್ಟು ಹಿರಿಯರಿದ್ದಾರೆ. ಜಾತಿ ಮತ್ತು ಪ್ರಾದೇಶಿಕ ಆದ್ಯತೆಯಲ್ಲಿ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಜಿಲ್ಲೆಯ ಅಭಿವೃದ್ಧಿ ಚಿಂತನೆ ಇರುವ ಡಿ.ಸುಧಾಕರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು ನನಗೂ ಸಂತಸ ಮೂಡಿಸಿದೆ ಎಂದು ಟಿ.ರಘುಮೂರ್ತಿ ಹೇಳಿದರು.