ಅಲ್ಪಭೂಮಿಯಲ್ಲಿ ಆದಾಯ ಅಧಿಕ

agri
Published on

ಕೆಂಪಶೆಟ್ಟಿದೊಡ್ಡಿ ರೈತ ಮಂಜುನಾಥ್​ ವ್ಯವಸಾಯ ಸಾಧನೆ

ಬಿಡದಿ: ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ಸಾಲ ಹೆಚ್ಚಾಯಿತು ಎನ್ನುವವರೇ ಹೆಚ್ಚಾಗಿದ್ದಾರೆ. ಆದರೆ, ಇಲ್ಲೊಬ್ಬರು ಇರುವ ಕಡಿಮೆ ಜಮೀನಿನಲ್ಲಿ ವ್ಯವಸಾಯದೊಂದಿಗೆ ಕೋಳಿ ಸಾಕಣೆ ಮತ್ತು ಹೈನುಗಾರಿಕೆ ಮಾಡಿ ಯಶಸ್ಸು ಕಂಡು ಸುಖೀ ಜೀವನ ನಡೆಸುತ್ತಿದ್ದಾರೆ.

ಹೌದು, ಕೃಷಿ ಮಾಡಲು ಹೆಚ್ಚಿನ ಜಮೀನು ಇದ್ದರೆ ಮಾತ್ರ ಆದಾಯ ಕಾಣಬಹುದು ಎಂಬ ಮಾತಿದೆ. ಆದರೆ, ಕೆಂಪಶೆಟ್ಟಿದೊಡ್ಡಿ ಗ್ರಾಮದ ರೈತ ಮಂಜುನಾಥ್​ 15 ಗುಂಟೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಉತ್ತಮ ಆದಾಯ ಗಳಿಸುವ ಮೂಲಕ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.

ತುಂಡು ಭೂಮಿಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತುಕೊಟ್ಟಿದ್ದಾರೆ. ಎಂಟು ಸೀಮೆ ಹಸು ಸಾಕಿದ್ದು, ಸುಸಜ್ಜಿತ ಶೆಡ್​ ನಿರ್ಮಿಸಿದ್ದಾರೆ. ಪ್ರತಿದಿನ 40 ರಿಂದ 50 ಲೀಟರ್​ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಪಶು ಆಹಾರಕ್ಕಾಗುವ ಖರ್ಚು ಕಳೆದು ಒಂದಿಷ್ಟು ಲಾಭ ಸಿಗುತ್ತಿದೆ. ಸ್ವಂತ ಕೊಳವೆಬಾವಿ ಹೊಂದಿರುವುದರಿಂದ ಜಮೀನಿನಲ್ಲೇ ಹಸುಗಳಿಗೆ ಮೇವಿಗಾಗಿ ಜೋಳ ಬೆಳೆದಿದ್ದಾರೆ.

ಮೂರು ತಿಂಗಳಿಗೊಮ್ಮೆ ಆದಾಯ

ಪ್ರಸ್ತುತ ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗೊಂಡಿರುವ ರೈತ 20 ನಾಟಿ ಮೇಕೆಗ ಸಾಕಿದ್ದಾರೆ. ಮೇಕೆಗಳಿಗೆ ಪ್ರತ್ಯೇಕ ಶೆಡ್​ ನಿರ್ಮಾಣ ಮಾಡಿದ್ದು, ಅವುಗಳ ಮೇವಿಗಾಗಿ ಅಜೋಲ ಜೋಳ ಬೆಳೆದಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಮೇಕೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.

ನಾಟಿಕೋಳಿ ಸಾಕಣೆೆ

ಬಹಳಷ್ಟು ಜನರು ಾಮ್​ರ್ ಕೋಳಿಗಳಿಗಿಂತ ನಾಟಿ ಕೋಳಿ ಆರೋಗ್ಯಕರ ಎಂದು ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ. ಬದಲಾದ ಮಾರುಕಟ್ಟೆಯ ಆದ್ಯತೆ ಗಮನಿಸಿರುವ ಮಂಜುನಾಥ್​ ನಾಟಿ ಕೋಳಿ ಸಾಕಲು ಒತ್ತು ಕೊಟ್ಟಿದ್ದಾರೆ. ಒಂದು ಬಾರಿಗೆ 250 ನಾಟಿ ಕೋಳಿಗಳನ್ನು ಸಾಕುತ್ತಾರೆ. ಒಂದರಿಂದ ಒಂದೂವರೆ ಕೆಜಿ ತೂಗುವ ಕೋಳಿಗಳನ್ನು ಮಾರಾಟ ಮಾಡುತ್ತಾರೆ. ಪ್ರತಿ ಕೆಜಿಗೆ 500 ರಿಂದ 550 ರೂ. ಆದಾಯ ಗಳಿಸುತ್ತಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇವರ ನಾಟಿ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ನೇರವಾಗಿ ಇವರ ಶೆಡ್​ ಬಳಿ ಬಂದು ಖರೀದಿಸುತ್ತಾರೆ. ಇದರ ಜತೆಗೆ ನಾಟಿ ಕೋಳಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಪ್ರತಿ ಮೊಟ್ಟೆಗೆ 15 ರೂ. ಮಾರುಕಟ್ಟೆ ಮೌಲ್ಯವಿದೆ. ಕೋಳಿ ಮರಿಗಳನ್ನು ಹೊರಗಿನಿಂದ ತರಿಸದೇ ಇರುವುದರಿಂದ ಹೆಚ್ಚಿನ ಖರ್ಚು ಉಳಿಯುತ್ತದೆ.

ಕೃಷಿ ಮಾಹಿತಿಗಾಗಿ ಮಂಜುನಾಥ್​ ಮೊಬೈಲ್​ ನಂ.9901268176 ಅನ್ನು ಸಂಜೆ 6 ರಿಂದ ರಾತ್ರಿ 9ರ ವೇಳೆಯಲ್ಲಿ ಸಂಪರ್ಕಿಸಬಹುದು.

ವ್ಯವಸಾಯಕ್ಕೆ ಎಕರೆ ಗಟ್ಟಲೆ ಜಮೀನು ಬೇಕು ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಆದರೆ, ಸರಿಯಾದ ಕ್ರಮ ಅನುಸರಿಸಿದರೆ ಕಡಿಮೆ ಭೂಮಿಯಲ್ಲೂ ಜೀವನಕ್ಕೆ ಬೇಕಾದ ಆದಾಯ ಸಂಪಾದನೆ ಮಾಡಲು ಸಾಧ್ಯ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. 15 ಗುಂಟೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿದ್ದೇನೆ.

> ಮಂಜುನಾಥ್​, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net