

ಪಿರಿಯಾಪಟ್ಟಣ: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರ ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಿದ್ದ ಸಹಕಾರ ಇಲಾಖೆಯ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಪಿರಿಯಾಪಟ್ಟಣ ಪಿ.ಎಂ.ಪ್ರಸನ್ನ ಅವರು ನಿರ್ದೇಶಕರಾಗಿ ನಂತರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ನಿರ್ದೇಶಕ ಸ್ಥಾನದ ಆಯ್ಕೆ ಮತ್ತು ಒಕ್ಕೂಟದ ಅಧ್ಯಕ್ಷ ಸ್ಥಾನದ ಬಗ್ಗೆ ಕೆಲವರು ಸಹಕಾರ ಇಲಾಖೆಗೆ ದೂರು ನೀಡಲಾಗಿ ಮೈಸೂರು ಜಿಲ್ಲಾ ಮತ್ತು ಹುಣಸೂರು ಉಪ ವಿಭಾಗ ಸಹಕಾರ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿ ಪಿ.ಎಂ.ಪ್ರಸನ್ನ ಅವರ ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಈ ಆದೇಶದ ವಿರುದ್ಧ ಪಿ.ಎಂ.ಪ್ರಸನ್ನ ಹೈಕೋರ್ಟ್ ಮನವಿ ಸಲ್ಲಿಸಲಾಗಿ ಸಹಕಾರ ಇಲಾಖೆ ಅಧಿಕಾರಿಗಳು ಮಾಡಿದ ನಿರ್ದೇಶಕ ಸ್ಥಾನದ ಅನರ್ಹ ಆದೇಶಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಪಿ.ಎಂ.ಪ್ರಸನ್ನ ‘ನನ್ನ ಆಡಳಿತ ಅವಧಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅವ್ಯವಹಾರಗಳಿಗೆ ಆಸ್ಪದ ನೀಡಿಲ್ಲ. ನಾನು ಕಾನೂನಿನಡಿ ಆಡಳಿತ ನಡೆಸಿದ್ದೇನೆ. ರೈತರಿಗೆ ನನ್ನ ಆಡಳಿತದ ಅವಧಿಯಲ್ಲಿ ಸಾಕಷ್ಟು ಅನುಕೂಲಕರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ರೈತರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಜಯ ಸಾಧಿಸುತ್ತೇನೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.