ವೈರಸ್ ಹರಡಲು ಕರೆ ನೀಡಿದ್ದ ಟೆಕ್ಕಿಗಿಲ್ಲ ಜಾಮೀನು

High Court vvani
Published on

ಬೆಂಗಳೂರು: ಕರೊನಾ ವೈರಸ್ ಹರಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸಾಫ್ಟ್​ವೇರ್ ಇಂಜಿನಿಯರ್​ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಟೆಕ್ಕಿ ಮೊಹಮ್ಮದ್ ಮುಜೀಬ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಪೀಠ, ಜಾಮೀನು ಮಂಜೂರು ಮಾಡಲು ನಿರಾಕರಿಸಿತು.

ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಅರ್ಜಿದಾರನಿಗೆ ತನ್ನ ನಡೆ ಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅರಿವಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಾಕ್ಯಗಳು ದೇಶದ ಸಾಮರಸ್ಯ, ಸಾರ್ವಭೌಮತ್ವ, ಭ್ರಾತೃತ್ವ ಮತ್ತು ಐಕ್ಯತೆಗೆ ಧಕ್ಕೆ ಉಂಟು ಮಾಡುವಂತಿದೆ. ಇಡೀ ಪ್ರಪಂಚ ಕೋವಿಡ್-19ನಂಥ ಆಘಾತಕಾರಿ ಸನ್ನಿವೇಶ ಎದುರಿಸುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ಇದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಬಹರೇನ್ ಮತ್ತು ಕುವೈತ್​ಗಳಲ್ಲಿ ಕೆಲ ವರ್ಷ ನೆಲೆಸಿದ್ದು, ಧಾರ್ವಿುಕ ಮೂಲಭೂತವಾದ ಹಾಗೂ ದೇಶ ವಿರೋಧಿ ಚಿಂತನೆ ಹೊಂದಿದ್ದ. ಇಸ್ಲಾಮಿಕ್ ಮಾಹಿತಿಗಾಗಿ ಪಾಕಿಸ್ತಾನದ ವಾಟ್ಸ್​ಆಪ್ ನಂಬರ್ ಹಂಚಿಕೊಂಡಿದ್ದಾನೆಂದು ತಿಳಿದುಬಂದಿದೆ. ಅರ್ಜಿದಾರನ ಸಂಪರ್ಕಗಳ ಬಗ್ಗೆ ಎನ್​ಐಎ ಸಹ ತನಿಖೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ಜಾಮೀನು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಸೀನುವ ಮೂಲಕ ಸೋಂಕು ಹರಡಿ ಎಂದಿದ್ದ..: ‘ಹೊರಗೆ ತೆರಳಿ ಸಾರ್ವಜನಿಕ ಪ್ರದೇಶದಲ್ಲಿ ಬಾಯಿ ಮುಚ್ಚಿಕೊಳ್ಳದೆ ಸೀನುವ ಮೂಲಕ ವೈರಸ್ ಹರಡಲು ನಾವೆಲ್ಲರೂ ಕೈಜೋಡಿಸೋಣ. ಈ ವಿಷಯವನ್ನು ಎಲ್ಲರಿಗೂ ಮುಟ್ಟಿಸಿ ಪ್ರಪಂಚ ಕೊನೆಗಾಣಿಸಿ. ನಾಯಿಗಳನ್ನು ಕೊಲ್ಲಲು ನನ್ನ ಸ್ಟನ್​ಗನ್ ಸಿದ್ಧವಿದೆ’ ಎಂದು ಮುಜೀಬ್ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಮಹೇಶ್ ಮಲ್ಲಯ್ಯನವರ್ ಎಂಬುವರು ಎಲೆಕ್ಟ್ರಾನಿಕ್ಸ್​ಸಿಟಿ ಪೊಲೀಸರಿಗೆ ದೂರು ನೀಡಿದ್ದರು. ಮಾ.9ರಂದು ಮುಜೀಬ್​ನನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net