

ಕೈಲಾಂಚ : ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ರಾಮನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್. ರಾಜು ತಿಳಿಸಿದರು. ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಮಾತನಾಡಿದರು. ಸರ್ಕಾರದ ಐದು ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಸಾಗಿದೆ. ಕೇವಲ ಬೆರಳೆಣಿಕೆ ಸಮಸ್ಯೆಗಳಿದ್ದು, ಅಂತಹ ಸಮಸ್ಯೆಗಳನ್ನು ಪ್ರತಿ ಗ್ರಾಪಂ ಮಟ್ಟದಲ್ಲಿ ಕುಂದು ಕೊರತೆ ಸಭೆ ನಡೆಸಿ ಅಂತಹವರ ಸಮಸ್ಯೆ ಅರಿತು ಸ್ಥಳದಲ್ಲೇ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಇಂದು ಹಲವು ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಕಂಡಿವೆ. ಗೃಹಲಕ್ಷ್ಮೀ, ಗೃಹಜ್ಯೋತಿ ಇನ್ನಿತರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಕುಟುಂಬಗಳು ಯೋಜನೆ ಲಾಭ ಪಡೆದು ಯೋಜನೆಯನ್ನು ವರದಾನವಾಗಿಸಿಕೊಂಡಿವೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜು ಮಾತನಾಡಿ, ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 1322 ಫಲಾನುಭವಿಗಳು ಯೋಜನೆ ಲಾಭ ಪಡೆಯುತ್ತಿದ್ದಾರೆ. ಆಧಾರ್, ಪಡಿತರ ಕಾರ್ಡ್ ಆನ್‌ಲೈನ್‌ನಲ್ಲಿ ಸರಿ ಹೊಂದದ ಕಾರಣ ತಾಂತ್ರಿಕ ಸಮಸ್ಯೆಯಿಂದ ಶೇ.25 ಫಲಾನುಭವಿಗಳಿಗೆ ಯೋಜನೆ ಲಾಭ ಸಿಗುತ್ತಿಲ್ಲ. ಅಂತಹ ಸಮಸ್ಯೆ ಇರುವವರಿಗೂ ಈಗಾಗಲೇ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಮಾರ್ಗದರ್ಶನ ನೀಡಲಾಗಿದೆ. ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದರು. ಸಭೆಯಲ್ಲಿ ಸಾರಿಗೆ, ಯುವನಿಧಿ, ಬೆಸ್ಕಾಂ, ಆಹಾರ ಇಲಾಖೆ, ಅಂಗನವಾಡಿ ಗ್ರಾಪಂ ಅಧಿಕಾರಿಗಳು ಹಾಜರಿದ್ದು, ಜನರ ಸಮಸ್ಯೆ ಆಲಿಸಿದರು. ಇದೇ ವೇಳೆ ಜನರು ನಮಗೆ ಪಡಿತರ ಬರುತ್ತಿಲ್ಲ, ಗೃಹಲಕ್ಷ್ಮೀ ನೋಂದಣಿ ಆಗುತ್ತಿಲ್ಲ, ಪಡಿತರ ಹಣ ಬರುತ್ತಿಲ್ಲ, ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ, ಅರಳಾಳುಸಂದ್ರಕ್ಕೆ ಹೊಸದೊಡ್ಡಿ ಕಾಡನಕುಪ್ಪೆ ಮಾರ್ಗವಾಗಿ ಹೋಗುವ ಬಸ್ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂಬಿತ್ಯಾದಿ ಸಮಸ್ಯೆಗಳನ್ನು ಜನರು ಮುಂದಿಟ್ಟರು. ಸಭೆಯಲ್ಲಿದ್ದ ಸಾರಿಗೆ ಘಟಕ ವ್ಯವಸ್ಥಾಪಕ ಮಹೇಶ್ ಬಸ್ ಸಂಚಾರ ಸಮಸ್ಯೆ ಬಗೆಹರಿಸುತ್ತೇವೆ. ಇನ್ನು ಮುಂದೆ ಅಂತಹ ಸಮಸ್ಯೆ ಬರುವುದಿಲ್ಲ ಎಂದು ಭರವಸೆ ನೀಡಿದರು. ಸದಸ್ಯ ಕುಮಾರ್, ವಿಎಸ್ಸೆಸ್ಸೆನ್ ಅಧ್ಯಕ್ಷ ಶಿವಣ್ಣ, ಮುಖಂಡರಾದ ಹೊಸದೊಡ್ಡಿ ಜಯಣ್ಣ, ಕಾಡನಕುಪ್ಪೆ ಭಗೀರಥ, ಬನ್ನಿಕುಪ್ಪೆ ವರದರಾಜು, ಸಿದ್ದರಾಜು, ಬಿಲ್ ಕಲೆಕ್ಟರ್ ಗಿರೀಶ್ ಇದ್ದರು.
ರಾಮನಗರ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಶೇ.100 ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅರ್ಹರಿಗೆ ಯೋಜನೆ ತಲುಪದಿದ್ದಲ್ಲಿ ಅಂತಹವರ ಸಮಸ್ಯೆ ತಿಳಿದು ಪರಿಹಾರ ಕಲ್ಪಿಸಲು ಗ್ರಾಪಂ ಮಟ್ಟದಲ್ಲಿ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ. ಹೀಗಾಗಿ ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಹಾಯವಾಗಲಿದೆ. ಜನರು ಇಂತಹ ಸಭೆಗಳಲ್ಲಿ ಭಾಗವಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಟಿ. ಪ್ರದೀಪ್, ತಾಪಂ ಕಾರ್ಯನಿರ್ವಹಣಾಧಿಕಾರಿ, ರಾಮನಗರ