ಹೆಸ್ಕಾಂಗೆ 14.85 ಕೋಟಿ ರೂ. ಹಾನಿ

VG
Published on

ವಿರೂಪಾಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ಪ್ರಸಕ್ತ ವರ್ಷದ ಏಪ್ರಿಲ್​ನಿಂದ ಜೂನ್​ವರೆಗೆ ಸುರಿದ ಭಾರಿ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿಗೆ (ಹೆಸ್ಕಾಂ) 14.85 ಕೋಟಿ ರೂಪಾಯಿ ಹಾನಿಯಾಗಿದೆ.

ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿಯಲ್ಲಿ 2025ನೇ ಸಾಲಿನಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ವಿದ್ಯುತ್​ ಕಂಬಗಳು, ವಿದ್ಯುತ್​ ಪರಿವರ್ತಕ (ಟಿಸಿ) ಹಾಗೂ ಲೈನ್​ (ತಂತಿ) ಹಾಳಾಗಿವೆ. ಹೆಸ್ಕಾಂ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ 1,047 ಕಂಬಗಳು ಧರೆಗುರುಳಿವೆ. ಗದಗ&758, ಹಾವೇರಿ&2,176, ಉತ್ತರ ಕನ್ನಡ&5,722, ಬೆಳಗಾವಿ&2,016, ವಿಜಯಪುರ& 1,225, ಬಾಗಲಕೋಟೆ ಜಿಲ್ಲೆಯಲ್ಲಿ 1,558 ಕಂಬಗಳು ನೆಲಕ್ಕುರುಳಿವೆ.

508 ಟಿಸಿ ಹಾಳು: ಧಾರವಾಡ&81, ಗದಗ&2, ಹಾವೇರಿ&26, ಉತ್ತರ ಕನ್ನಡ&283, ಬೆಳಗಾವಿ&60, ವಿಜಯಪುರ&5, ಬಾಗಲಕೋಟೆ ಜಿಲ್ಲೆಯಲ್ಲಿ 51 ವಿದ್ಯುತ್​ ಪರಿವರ್ತಕ(ಟಿಸಿ)ಗಳಿಗೆ ಹಾನಿಯಾಗಿವೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ 1.45 ಕಿ.ಮೀ., ಉತ್ತರ ಕನ್ನಡ& 21.62 ಕಿ.ಮೀ., ಬಾಗಲಕೋಟೆ& 30.10 ಕಿಲೋ ಮೀಟರ್​ನಷ್ಟು ವಿದ್ಯುತ್​ ತಂತಿ (ಲೈನ್​) ಹಾನಿಗೊಳಗಾಗಿದೆ.

ಉತ್ತರ ಕನ್ನಡದಲ್ಲಿ ಹೆಚ್ಚು ನಷ್ಟ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 5,722 ವಿದ್ಯುತ್​ ಕಂಬಗಳು ಬಿದ್ದಿದ್ದು, 283 ಟಿಸಿಗಳು ಹಾನಿಯಾಗಿವೆ. 21.62 ಕಿ.ಮೀ. ನಷ್ಟು ವಿದ್ಯುತ್​ ತಂತಿ ಹಾಳಾಗಿದೆ.

ಕಳೆದ 2024ರ ಏಪ್ರಿಲ್​ನಿಂದ ಆಗಸ್ಟ್​ವರೆಗೆ ಭಾರಿ ಮಳೆ ಮತ್ತು ಗಾಳಿಯಿಂದ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಒಟ್ಟು 16,791 ವಿದ್ಯುತ್​ ಕಂಬಗಳು ಬಿದ್ದಿದ್ದವು. 1,602 ಟಿಸಿಗಳು ಹಾನಿಯಾಗಿದ್ದವು. 448 ಕಿಲೋ ಮೀಟರ್​ನಷ್ಟು ವಿದ್ಯುತ್​ ತಂತಿ (ಲೈನ್​) ಹಾಳಾಗಿದ್ದು, ಒಟ್ಟು 26.65 ಕೋಟಿ ರೂ. ನಷ್ಟು ನಷ್ಟವಾಗಿದ್ದವು.

ನವಲಗುಂದ ಪಟ್ಟಣದ ಹೊರವಲಯದಲ್ಲಿ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ವ್ಯಾಪ್ತಿಯಲ್ಲಿ ಹಳ್ಳದ ದಡದಲ್ಲಿರುವ ವಿದ್ಯುತ್​ ಕಂಬಗಳು ವಾಲಿವೆ. ಕೃಷಿ ಕೆಲಸಗಳಿಗಾಗಿ ರೈತರು ಹೊಲಗಳಿಗೆ ತೆರಳುತ್ತಾರೆ. ಜನ&ಜಾನುವಾರುಗಳಿಗೆ ಜೀವಹಾನಿ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ, ಅವುಗಳನ್ನು ಕೂಡಲೇ ದುರಸ್ತಿಪಡಿಸಬೇಕು.

> ಲಿಂಗರಾಜ ಸಿದ್ರಾಮಶೆಟ್ಟರ ನವಲಗುಂದ ರೈತ

ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಮಳೆ&ಗಾಳಿಯಿಂದ ತುಂಬಾ ಹಾನಿಯಾಗಿದೆ. ಎಲ್ಲೆಲ್ಲಿ ವಿದ್ಯುತ್​ ಕಂಬಗಳು, ಟಿಸಿಗಳು ಮತ್ತು ವಯರ್​ ಹಾನಿಯಾಗಿದೆಯೋ ಅಲ್ಲಿ ತಕ್ಷಣ ನಮ್ಮ ಸಿಬ್ಬಂದಿ ವಿದ್ಯುತ್​ ಕಂಬ, ಟಿಸಿಗಳನ್ನು ಹೊಸದಾಗಿ ಅಳವಡಿಸಿದ್ದಾರೆ. ಮಳೆ&ಗಾಳಿಯಿಂದ ಹಾನಿಗೀಡಾದ ಸ್ಥಳಗಳಲ್ಲಿ ವಿದ್ಯುತ್​ ಕಂಬ ಅಳವಡಿಸುವುದು ಬಾಕಿ ಇದ್ದರೆ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ.

> ವೈಶಾಲಿ ಎಂ.ಎಲ್​. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net