

ಕೊಟ್ಟೂರು: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಕೊಟ್ಟೂರೇಶ್ವರ ಕಾಲೇಜಿಗೆ ಹೋಗುವ ಮಾರ್ಗದಲ್ಲಿ ರಾಜ, ಪಾಳೇಗಾರರಿಗಾಗಿ ಜೀವ ಅರ್ಪಿಸಿ ವೀರಸ್ವರ್ಗಸ್ತರಾದ ಇಬ್ಬರು ವೀರ ಯೋಧರ ವೀರಗಲ್ಲುಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ಇದನ್ನೂ ಓದಿ:ಶಾಸನೋಕ್ತ ವೀರಗಲ್ಲು ಪತ್ತೆ
ಬನ್ನಿ ಮರದ ಕಟ್ಟೆಯ ಮೇಲಿರುವ ವೀರಗಲ್ಲಿನ ಪಕ್ಕದಲ್ಲಿ ಶಿವಪಾರ್ವತಿಯ ಉಬ್ಬುಗಲ್ಲು ವಿಗ್ರಹವಿದೆ. ಇದರ ಹಿಂಭಾಗದಲ್ಲಿ ಮತ್ತೊಂದು ವೀರಗಲ್ಲು ಮುಳ್ಳುಪೊದೆಯಲ್ಲಿದೆ. ಎರಡು ಅಡಿ ಎತ್ತಿರವಿದ್ದು, ಕಪ್ಪು ಬಳಪದ ಕಲ್ಲಿನಲ್ಲಿ ವೀರಗಲ್ಲು ಕೆತ್ತಲಾಗಿದೆ. ಕೆಳಭಾಗದಲ್ಲಿ ವ್ಯಕ್ತಿಯೊಬ್ಬ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದು, ಪಕ್ಕದಲ್ಲಿ ಇಬ್ಬರು ನರ್ತಕಿಯರು ಇದ್ದಾರೆ.
ಮತ್ತೊಂದು ವೀರಗಲ್ಲಿನಲ್ಲಿ ಕೆಳಭಾಗದಲ್ಲಿ ವ್ಯಕ್ತಿಯೊಬ್ಬ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದು, ಎಡ ಹಾಗೂ ಬಲ ಬದಿಯಲ್ಲಿ ಮಹಿಳೆಯರು ಚಾಮರ ಬೀಸುವ ಭಂಗಿಯಲ್ಲಿದ್ದು, ಮೇಲ್ಬಾಗದಲ್ಲಿ ಶಿವಲಿಂಗ ಪಕ್ಕದಲ್ಲಿ ವ್ಯಕ್ತಿ ನಿಂತಿರುವ ಹಾಗೂ ಮತ್ತೊಂದು ಕುಳಿತಿರುವ ಭಂಗಿಯಲ್ಲಿ ಇದೆ. ಕೆಳಭಾಗದಲ್ಲಿ ಯುದ್ಧದ ಸನ್ನಿವೇಶ ಕೆತ್ತನೆ ಮಾಡಲಾಗಿದೆ. ಬಿಳಿ ಕಲ್ಲಿನಲ್ಲಿ ಪಾರ್ವತಿ ಪರಮೇಶ್ವರ ವಿಗ್ರಹವಿದೆ.
ಆದರೆ, ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವ ಸ್ಥಳದಲ್ಲಿ ಇಟ್ಟಿದ್ದಾರೆ. ಈ ಭಾಗದಲ್ಲಿ ಉತ್ಖನನ ನಡೆಸಿದರೆ ಸಾಕಾಷ್ಟು ಇತಿಹಾಸ ದೊರೆಯಲಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಈ ವೀರಗಲ್ಲು ಇರುವ ಸ್ಥಳದ ಪಕ್ಕದಲ್ಲೇ ಹಾದುಹೋಗುವಾಗ ಇದನ್ನು ಗಮನಿಸಿ ಇವುಗಳನ್ನು ರಕ್ಷಿಸಬೇಕಾಗಿದೆ.