ಬಳ್ಳಾರಿ : ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ವಿಜಯನಗರ ತಿರುಗಾಟ ಸಂಶೋಧನ ತಂಡ ರಾಷ್ಟ್ರಕೂಟರ ಅಪರೂಪದ ಅಪ್ರಕಟಿತ ಶಾಸನೋಕ್ತ ವೀರಗಲ್ಲನ್ನು ಪತ್ತೆ ಹಚ್ಚಿದೆ.
ಈ ಶಾಸನೋಕ್ತ ವೀರಗಲ್ಲು ಉತ್ತರಾಭಿಮುಖವಾಗಿದ್ದು, ಎರಡು ಹಂತದಲ್ಲಿ ರಚನೆಯಾಗಿದೆ. ಅಪರೂಪವಾದ ವೀರಗಲ್ಲಿನಲ್ಲಿ ವೀರನು ಎದುರಾಳಿಯ ದಾಳಿಯನ್ನು ದೀರೋದಾತ್ತವಾಗಿ ಕಾದಾಟ ಮಾಡುವುದನ್ನು ತುಂಬಾ ಸುಂದರವಾಗಿ ಕೆತ್ತಲಾಗಿದೆ.
ಕನ್ನಡ ವಿವಿ ಸಾಹಿತ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ ಮಾತನಾಡಿ, 8 ಅಡಿ ಎತ್ತರ 3 ಅಡಿ ಅಗಲದ ವೀರಗಲ್ಲು ಪೆಗ್ಗಡೆಯ ಮಗನಾದ ಸಿರಿಯಣ್ಣನು ವೀರಮರಣ ಹೊಂದಿರುವ ಕುರಿತಾಗಿ ಮಾಹಿತಿ ನೀಡುತ್ತದೆ. ರಾಷ್ಟ್ರಕೂಟರ ಕಾಲದ ಲಿಪಿಯನ್ನು ಹೋಲುವ ಈ ಶಾಸನ ಪಾಠವು ಮೂರು ಸಾಲುಗಳಲ್ಲಿದೆ. ಶ್ರೀಕೊಂಡ ಸರು ಪಾಡದಿ ಪೆಗ್ಗಡೆಯ ಮಗ ಸಿರಿಯಣ್ಣ ಎಂಬುದಾಗಿ ನಮೂದಿಸಲಾಗಿದೆ. ಪ್ರತಿ ಸಾಲಿನ ಅಕ್ಷರಗಳು ಮೂರು ಇಂಚು ಎತ್ತರ ಎರಡು ಇಂಚು ಅಗಲವಾಗಿವೆ ಎಂದು ತಿಳಿಸಿದ್ದಾರೆ.
ಸಂಶೋಧನ ತಂಡದ ಪ್ರೊ.ಎಚ್.ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ.ಕೃಷ್ಣೆಗೌಡ, ಡಾ.ವೀರಾಂಜನೇಯ, ಸಂಶೋಧಕರಾದ ರವಿ, ಮಂಜುನಾಥ ಪತ್ತೆ ಹೆಚ್ಚಿದ್ದಾರೆ.