

ತುಮಕೂರು: ತುಮಕೂರಿಗೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಹೇಮಾವತಿ ನೀರು ಹರಿಸಲಾರಂಭಿಸಿದ್ದು ಪ್ರಸ್ತುತ ಸಂಗ್ರಹವಾಗುವ ನೀರು ಮುಂದಿನ 8 ತಿಂಗಳ ಕಾಲ ನಗರಕ್ಕೆ ಪೂರೈಕೆ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.
ನಗರದ ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೊರೂರು ಜಲಾಶಯದಿಂದ ಹೇಮಾವತಿ ನಾಲೆಗೆ ಮೇ23ರಂದು ನೀರು ಹರಿಯಬಿಟ್ಟಿದ್ದು, ಮೇ 25ರ ರಾತ್ರಿ ಬುಗಡನಹಳ್ಳಿ ಕೆರೆಗೆ ನೀರು ತಲುಪಿದೆ ಎಂದು ಮಾಹಿತಿ ನೀಡಿದರು.
ಕುಡಿಯುವ ನೀರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹಾಸನದಲ್ಲಿ ಇತ್ತೀಚೆಗೆ ಜರುಗಿದ ನೀರಾವರಿ ಸಮಿತಿ ರ್ನಿಣಯದಂತೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಮಕೂರಿಗೆ ಗೊರೂರು ಜಲಾಶಯದಿಂದ ನೀರು ಹರಿಸಲಾಗಿದೆ. ಮುಂದಿನ 50 ದಿನಗಳಿಗೆ ಮಾತ್ರ ಪೂರೈಕೆ ಮಾಡುವಷ್ಟು ಕೆರೆಯಲ್ಲಿ ನೀರು ಲಭ್ಯವಿತ್ತು. ಮುಂದಾಲೋಚನೆಯಿಂದ ಕೆರೆಗೆ ನೀರು ಹರಿಸಲಾಗಿದೆ ಎಂದರು.
ಹೇಮಾವತಿ ನೀರನ್ನು ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸಿ ಶುದ್ಧೀಕರಿಸಿ ನಾಗರಿಕರಿಗೆ ಪೂರೈಕೆ ಮಾಡಲಾಗುವುದು, ಹೇಮಾವತಿ ಜಲಾಶಯದಿಂದ ಪ್ರತಿ ದಿನ 2 ಟಿಎಂಸಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ರ್ನಿಣಯ ಕೈಗೊಳ್ಳಲಾಗಿದೆ. ಮುಂದಿನ 8 ದಿನಗಳಲ್ಲಿ ಕೆರೆ ಭರ್ತಿಯಾಗಲಿದ್ದು, ಕೆರೆ ಭರ್ತಿಯಾದ ನಂತರ ಹೆಬ್ಬಾಕ, ನರಸಾಪುರ, ಅಮಾನಿಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡಲಾಗುವುದು. ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ತಿಳಿಸಿದರು.
ಪ್ರಸಕ್ತ ವರ್ಷ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಜಿಲ್ಲಾಡಳಿತದಿಂದ ಈಗಾಗಲೇ ಸಭೆಗಳನ್ನು ನಡೆಸಿ ನೀಲನಕ್ಷೆಯನ್ನು ಸಿದ್ಧಪಡಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪಾವಗಡ ಶಾಸಕ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಹೇಮಾವತಿ ನಾಲಾ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಸಂಪತ್ ಕುಮಾರ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎ.ಸಿ.ಶಿವಶಂಕರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್ ಬಾಬುರೆಡ್ಡಿ ಇದ್ದರು.