

ಚನ್ನರಾಯಪಟ್ಟಣ: ಹೇಮಾವತಿ ನದಿ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯ ರೈತರಿಗೆ ಹೆಚ್ಚು ಅನುಕೂಲವಾಗಬೇಕು, ಮೊದಲು ಜಿಲ್ಲೆಯ ಮತ್ತು ತಾಲೂಕಿನ ರೈತರಿಗೆ ನೀರು ಬಳಕೆಗೆ ಅವಕಾಶ ಮಾಡಿಕೊಟ್ಟು ತದನಂತರ ಹೊರ ಜಿಲ್ಲೆಗೆ ನೀರನ್ನು ಹರಿಸಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.
ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಲೆಕ್ಕ ಶೀರ್ಷಿಕೆ 4701 ಅನುದಾನದಡಿ 85 ಲಕ್ಷ ರೂ. ವೆಚ್ಚದಲ್ಲಿ ಗುಣಮಟ್ಟ ನಿಯಂತ್ರಣ ಉಪವಿಭಾಗ ಕಚೇರಿ, ಪ್ರಯೋಗಾಲಯದ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಾಣ ಸೇರಿದಂತೆ ನವೀಕರಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಹೊರ ಜಿಲ್ಲೆಗಳಿಗೆ 25 ಟಿಎಂಸಿಗೂ ಹೆಚ್ಚು ನೀರು ಹರಿದಿದ್ದು ಇನ್ನು ಮುಂದೆಯಾದರೂ ಈ ಭಾಗದ ರೈತರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಹೆಚ್ಚು ನೀರು ಪೋಲಾಗದಂತೆ ಪೂರ್ಣ ಪ್ರಮಾಣದ ನೀರು ಬಳಕೆಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹೇಮಾವತಿ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ಜಲಾಶಯದ ಒಳಹರಿವು ಎಷ್ಟಿದೆಯೋ ಅಷ್ಟೇ ಪ್ರಮಾಣದ ನೀರನ್ನು ವಿತರಣಾ ನಾಲೆಗಳಿಗೆ ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿರ್ವಹಣೆ ಮುಖ್ಯವಾಗಿದ್ದು, ಈ ವಿಭಾಗದ ಜವಾಬ್ದಾರಿ ಹೆಚ್ಚಾಗಿದೆ. ನೀರಿನ ಹರಿವು ನಾಲೆಯಲ್ಲಿ ಹೆಚ್ಚಾಗಿದೆ. ಕೊನೆಯ ಭಾಗಕ್ಕೂ ನೀರು ಹರಿಯುವಂತೆ ನೋಡಿಕೊಳ್ಳಬೇಕಿದೆ. ನಿರ್ವಹಣೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆಯಿಂದ ಶಿವರ ಮತ್ತು ಬಿದರೇಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಹಿರೀಸಾವೆ ಏತನೀರಾವರಿ ಯೋಜನೆಯಲ್ಲಿ ತಾಂತ್ರಿಕ ದೋಷವುಂಟಾಗಿದ್ದು, ಶೀಘ್ರ ಬಗೆಹರಿಸಿ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಆಲಗೋಡನಹಳ್ಳಿ ಏತನೀರಾವರಿ ಯೋಜನೆಯ ನೀರೆತ್ತುವ ಕಾರ್ಯ ಪ್ರಗತಿಯಲ್ಲಿದ್ದು, ತೋಟಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅರಳಾಪುರ ಬಳಿ 900 ಮೀಟರ್ ಕಾಮಗಾರಿ ಬಾಕಿ ಇದೆ. ಇದಕ್ಕೆ ಜಾಗ ನೀಡಲು ರೈತರ ಮನವೊಲಿಸಲಾಗಿದ್ದು, ಅವರಿಂದ ಸಹಮತ ವ್ಯಕ್ತವಾಗಿದೆ. ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆಗೆ 4 ಕೋಟಿ ರೂ. ಬೇಕಾಗಿದೆ. ಈ ಬಗ್ಗೆ ಮನವಿ ಮಾಡಲಾಗಿದೆ. ತಾಲೂಕಿನಲ್ಲಿ ಪ್ರಗತಿಯಲ್ಲಿರುವ ತೋಟಿ ಏತನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರದಿಂದ 10.15 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಬೆಳಗಿಹಳ್ಳಿ ಪುಟ್ಟಸ್ವಾಮಿ, ಹುಲಿಕೆರೆ ಸಂಪತ್, ಕಲ್ಕೆರೆ ನಾಗಣ್ಣ, ಗುತ್ತಿಗೆದಾರ ಗೋಪಾಲ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಆರ್.ಡಿ.ಗಂಗಾಧರ್, ಪ್ರಭಾರ ಎಇಇ ದೀಪು, ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಭಾಗವಹಿಸಿದ್ದರು.