

ಮಾಗಡಿ: ಮಾಗಡಿಗೆ ಹೇಮಾವತಿ ನೀರನ್ನು ತೆಗೆದುಕೊಂಡು ಬರುತ್ತೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ನೇರಳೆಕೆರೆಯ, ಮನೆದೇವರು ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿಗೆ ಹೇಮಾವತಿ ನೀರನ್ನು ಇಂತಿಷ್ಟು ನೀಡಬೇಕು ಎಂದು ಸರ್ಕಾರ ನಿಗದಿಪಡಿಸಿದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ತಡೆದ ವೇಳೆ ಇಲ್ಲಿನ ನಾಯಕರು ತುಮಕೂರಿನ ನಾಯಕರಿಗೆ ಮನವಿ ಮಾಡಬೇಕಿತ್ತು. ಅದನ್ನು ಮಾಡಲಿಲ.್ಲ ನಾವು ಎಲ್ಲರ ಮನವೊಲಿಸಿ ಮಾಗಡಿ ತಾಲೂಕಿಗೆ ಹೇಮಾವತಿ ನೀರನ್ನು ತಂದೇ ತರುತ್ತೇವೆ ಎಂದರು.
ನೇರಳೆಕೆರೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಕಾಂಪೌಂಡ್ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನ ಬಹುತೇಕ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ನೀಲಿನಕ್ಷೆ ತಯಾರಿಸಲಾಗಿದೆ. ಕೆಂಪೇಗೌಡರು ನಿರ್ಮಿಸಿರುವ ಕಲ್ಯಾಣಿ, ಗುಡಿ, ಗೋಪುರ, ವೀರ ಸಮಾಧಿಯ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗಿದೆ ಎಂದರು.
ಹುಟ್ಟುಹಬ್ಬದ ಪ್ರಯುಕ್ತ ಮನೆ ದೇವರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದು ಸಾಮಾನ್ಯ. ಅದರಂತೆ ಭಾಗವಹಿಸಿ ಪೂಜೆ ಸಲ್ಲಿಸಿರುವೆ. ಉತ್ತಮ ಮಳೆ, ಬೆಳೆಯಾಗಿ ರೈತರು ಸಮೃದ್ಧಿಯಾಗಿ ಬದುಕುವಂತೆ ದೇವರಲ್ಲಿ ಪ್ರಾರ್ಥಿಸಿರುವೆ ಎಂದರು.
ದೇವಾಲಯದ ಬಳಿ ಶಾಸಕ ಎಚ್.ಸಿ.ಬಾಲಕೃಷ್ಣ ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಕೇಕ್ ತಿನ್ನಿಸಿದರು.
ಕಾರ್ಯಕ್ರಮದ ಆಯೋಜಕ ನೇರಳೆಕೆರೆ ಗಂಗಾಧರಯ್ಯ ಮಾತನಾಡಿ, ಶಾಸಕ ಎಚ್.ಸಿ.ಬಾಲಕೃಷ್ಣ ಅವರುಕ್ಷೇತ್ರದ ನಾಡಿಮಿಡಿತ ಅರಿತಿರುವರು. ಯಾವ ಗ್ರಾಮದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳಾಗಬೇಕು ಎಂಬುದು ಗೊತ್ತಿದೆ. ಅಭಿವೃದ್ಧಿ ಕಾರ್ಯದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ಕ್ಷೇತ್ರದ ಜನರ ಆಸೆ ಎಂದರು.
ಕಾಂಗ್ರೆಸ್ ಮುಖಂಡ ಬಗಿನಗೆರೆ ಕುಮಾರ್, ಬಮುಲ್ ನಿರ್ದೇಶಕಕೆಇಬಿ ರಾಜಣ್ಣ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಮಹಿಳಾ ಮುಖಂಡೆ ಶೈಲಜಾ, ವನಜಾ, ತಾಪಂ. ಮಾಜಿ ಅಧ್ಯಕ್ಷ ಶಿವರಾಜ್, ಅನಸೂಯಮ್ಮ ಮರಿಗೌಡ, ದೀಪು ಉದ್ದೀಶ್, ಜಾಣಗೆರೆ ರವೀಶ್, ಪಾಪಣ್ಣಿ, ನಾರಸಂದ್ರ ಶಿವಪ್ರಸಾದ್, ಕಿರಣ್,ರಾಜೇಶ್, ಹನುಮಂತಯ್ಯ, ಜಯಣ್ಣ, ಮಧು, ವೆಂಕಟೇಶ್, ತಿಪ್ಪಸಂದ್ರ ಗ್ರಾಪಂ ಸದಸ್ಯ ರಮೇಶ್ ಇತರರು ಇದ್ದರು.
ತುಮಕೂರಿನವರು ನಮ್ಮ ಸಹೋದರರೇ
ಕುದೂರು ಹೋಬಳಿ ಈ ಭಾಗಕ್ಕೆ ತುಮಕೂರಿನ ಹಾಲು ಪೂರೈಕೆಯಾಗುತ್ತದೆ. ಅದನ್ನು ತಡೆದರೆ ಏನಾಗುತ್ತದೆ ಎಂದು ಅಲ್ಲಿನ ನಾಯಕರಿಗೆ ತಿಳಿಯಬೇಕು. ನೀರು ಎಲ್ಲರ ಹಕ್ಕು. ತುಮಕೂರಿನ ಜನತೆ, ರೈತರು ನಮ್ಮ ಸಹೋದರರೇ. ಅವರಿಗೆ ಅನ್ಯಾಯ ಮಾಡಿ ನಾವು ಹೇಮಾವತಿ ನೀರನ್ನು ಮಾಗಡಿಗೆ ತೆಗೆದುಕೊಂಡು ಬರುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ನೀರು ನಮಗೆ ಪೂರೈಕೆ ಮಾಡಿ ಎಂದು ಕೇಳುತ್ತಿದ್ದೇವೆ. ಅದು ತಪ್ಪೇ?, ನಮ್ಮ ಭಾಗಕ್ಕೆ ನೀರು ಬೇಡವೇ? ನಾವು ಹೀಗೆಯೇ ಹಿಂದುಳಿಯಬೇಕೆ? ಎಂದು ಪ್ರಶ್ನಿಸಿದರು.