ಹೇಮೆ ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲ

Heme_Bugudnahalli_Cong
Published on

ತುಮಕೂರು: ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮೆ ನೀರು ಹರಿಸುವ ಮೂಲಕ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲೆಯ ಸಚಿವರಾದ ಡಾ.ಜಿ.ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಶ್ರಮಿಸಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ನೀರನ್ನು ಹಿತಮಿತವಾಗಿ ಬಳಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಹೇಳಿದರು.

ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಭಾನುವಾರ ಭೇಟಿ ನೀಡಿದ ಕಾಂಗ್ರೆಸ್ ನಿಯೋಗದ ನೇತೃತ್ವವಹಿಸಿದ್ದ ಮುರಳೀಧರ ಹಾಲಪ್ಪ ಗಂಗಾಪೂಜೆ ನೆರವೇರಿಸಿ ಮಾತನಾಡಿ, ತುಮಕೂರು ನಗರಕ್ಕೆ ಮತ್ತು ಗ್ರಾಮಾಂತರಕ್ಕೆ ಇದು ಜೀವಾಳ. ನೀರು ಹರಿಯುವ ವಿಚಾರದಲ್ಲಿ ಯಾವುದೇ ಒಳ ಮಸಲತ್ತು ನಡೆಯಬಾರದೆಂಬ ಹಿನ್ನಲೆಯಲ್ಲಿ ನಾವೇ ಖುದ್ದಾಗಿ ಬಂದು ಪರಿಶೀಲಿಸಿದ್ದೇವೆ. ನೀರಿನಲ್ಲಿ ರಾಜಕೀಯ ಮಾಡದೆ ನಮ್ಮ ಪಾಲಿನ ಹೇಮಾವತಿ ನೀರು ಪಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರು ಸಂಪೂರ್ಣ ಹರಿಸಲು ಶಾಶ್ವತವಾದ ಸೂತ್ರವನ್ನು ಕಂಡುಕೊಳ್ಳಬೇಕೆಂಬುದು ಎಲ್ಲರ ಒತ್ತಾಸೆಯಾಗಿದೆ. ಜಿಲ್ಲೆಯ ಸಚಿವರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈಗಾಗಲೇ ಮುಂಗಾರು ವಿಳಂಬವಾಗಿದ್ದು, ಇನ್ನೂ ಸ್ವಲ್ಪದಿನ ಕಾಯಬೇಕಾಗುತ್ತದೆ. ಮಳೆ ಬರುವ ಮುನ್ಸೂಚನೆ ಇದೆಯಾದರೂ ಮಳೆ ಕೈಕೊಟ್ಟರೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದೇ ಆದಲ್ಲಿ ತುಮಕೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ಎಂದು ಮುರಳೀಧರ ಹಾಲಪ್ಪ ಹೇಳಿದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ರೇವಣಸಿದ್ಧಯ್ಯ, ಗ್ರಾಮಾಂತರ ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಎಸ್ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಎಸ್ಸಿ ಘಟಕದ ಲಿಂಗರಾಜು, ಕಾರ್ಮಿಕ ಘಟಕದ ರಹೀಂ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆಂಪಣ್ಣ, ನರಸಿಂಹಮೂರ್ತಿ, ಕೈದಾಳ ರಮೇಶ್, ಟೂಡ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಮಹಿಳಾ ಬ್ಲಾಕ್ ಅಧ್ಯಕ್ಷೆ ಕವಿತ, ಮಂಗಳಮ್ಮ, ಮರಿಚೆನ್ನಮ್ಮ, ಮಂಜುನಾಥ್, ಗೋವಿಂದೇಗೌಡ, ರಾಜಪ್ಪ, ವಸುಂಧರ ಮತ್ತಿತರರು ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net