

ತುಮಕೂರು: ಹೇಮಾವತಿ ತುಮಕೂರು ಶಾಖಾ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಸದೇ ಹೋದರೆ ನಾಲಾ ವಲಯದ ಮುಖ್ಯಇಂಜಿನಿಯರ್ ಕಚೇರಿ ಮುಂಭಾಗ ಪ್ರತಿಭಟಿಸುವುದಾಗಿ ಮಾಜಿ ಸಚಿವ ಸೊಗಡುಶಿವಣ್ಣ ಎಚ್ಚರಿಸಿದರು.
ಗೊರೂರಿನ ಹೇಮಾವತಿ ಜಲಾಶಯದಿಂದ ಜಿಲ್ಲೆಯ ಪಾಲಿನ ನೀರನ್ನು ಹರಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರು ಶಾಖಾ ನಾಲೆ (ಟಿಬಿಸಿ)ಯಲ್ಲಿ ಜಿಲ್ಲೆಗೆ ನಿಗದಿತ ಪ್ರಮಾಣದ ನೀರು ಹರಿಸಲು ಹೇಮಾವತಿ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ತಕ್ಷಣವೇ ಕ್ರಮ ಕೈಗೊಳ್ಳುವಂತೆ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹೇಮಾವತಿ ಜಲಾಶಯದಿಂದ ತುಮಕೂರು ಶಾಖಾ ನಾಲೆಗೆ ಕಳೆದ 15 ದಿನಗಳಿಂದ ನೀರು ಬಿಡಲಾಗಿದೆ. ನಾಲೆಯ 125 ಕಿ.ಮೀ., ಯಿಂದ ಬುಗುಡನಹಳ್ಳಿ ರೆಗ್ಯುಲೆಟರ್ ಹತ್ತಿರ ನಾವು ಭೇಟಿ ನೀಡಿದ ಸಂದರ್ಭದಲ್ಲಿ 1.7 ಮೀಟರ್ ಎತ್ತರ ಹೇಮಾವತಿ ನೀರು ಹರಿಯುತ್ತಿದ್ದು 350 ಕ್ಯೂಸೆಕ್ಸ್ ಪ್ರಮಾಣದಲ್ಲಿ ಹರಿಯುತ್ತಿದೆ. ಆದರೆ, ನೀರು ಹರಿಯುವ ವಿನ್ಯಾಸಿತ ಸಾಮರ್ಥ್ಯ 1050 ಕ್ಯೂಸೆಕ್ಸ್ ನಷ್ಟಿದೆ. ಆದರೆ, ಪೂರ್ಣ ಪ್ರಮಾಣದ ನೀರು ಹರಿಸದೆ ಕಡಿಮೆ ಪ್ರಮಾಣದಲ್ಲಿ ನೀರನ್ನು ಹೇಮಾವತಿ ಅಧಿಕಾರಿಗಳು ಹರಿಸುತ್ತಿದ್ದು ನಮ್ಮ ಜನಪ್ರತಿನಿಧಿಗಳು ಕಣ್ಮುಚ್ಚಿಕುಳಿತಿದ್ದಾರೆ ಎಂದರು.
ಹೇಮಾವತಿ ಜಲಾಶಯ ತುಂಬಿರುವ ಇಂತಹ ಸಂದರ್ಭದಲ್ಲಿ ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಇದ್ದರೂ ಸಹ ಸರಿಯಾಗಿ ನೀರು ಹರಿಸದೇ ಇರುವುದ ಸರಿಯಾದ ಕ್ರಮವಲ್ಲ. ಇದರಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇನ್ನು ಮುಂದಾದರೂ ಜನಪ್ರತಿನಿಧಿಗಳು ನೀರಾವರಿ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡಿ ಜಿಲ್ಲೆಗೆ ಹರಿಸಬೇಕಾಗಿರುವ ಹೇಮಾವತಿ ನೀರು ಸಮರ್ಪಕವಾಗಿ ಹರಿಸುವ ನಿಟ್ಟಿನಲ್ಲಿ ಚುರುಕುಗೊಳಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಜಿಲ್ಲೆಯ ಪಾಲಿನ ನೀರನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಎಲ್ಲರ ಪ್ರಯತ್ನ ಬೇಕು. ಹೇಮಾವತಿ ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಹರಿಸದೆ ನಾಲೆಯ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ಇದರಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಹೊಣೆಗೇಡಿತನವಿದೆ. ಸೂಕ್ತ ಕ್ರಮವಹಿಸದಿದ್ದರೆ ನಗರದ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಪುನರುಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಕೆ.ಪಿ.ಮಹೇಶ್, ಪ್ರಭಾಕರ್ ಇದ್ದರು.