ಸರ್ಕಾರದ ಲಾಟಿಗೆ ರೈತರ ಎಡೆಮಟ್ಟೆ ಸೇವೆ : ಹೀಗೆಂದು ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದ್ದೇಕೆ?

MTK_Web
Published on

ತುರುವೇಕೆರೆ : ಜನವಿರೋಧಿ ಎಕ್ಸ್​ಪ್ರಸ್​ ಲಿಂಕ್​ ಕೆನಾಲ್​ ಕಾಮಗಾರಿಯನ್ನು ಪೊಲೀಸರ ರಕ್ಷಣೆಯಲ್ಲಿ ಮಾಡಲು ಹೊರಟಿದೆ. ಸರ್ಕಾರದ ಲಾಟಿಗೆ ಹೆದರುವುದಿಲ್ಲ, ನಾವು ಎಡೆಮಟ್ಟೆ ಸೇವೆ ಮಾಡುತ್ತೇವೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗುಡುಗಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ರಾಮನಗರ ಎಕ್ಸ್​ಪ್ರಸ್​ ಲಿಂಕ್​ ಕೆನಾಲ್​ ಯೋಜನೆ ಕೈಬಿಡುವಂತೆ ಹೋರಾಟ ಮಾಡಿದ್ದೇವೆ. ನಾವೇ ಖುದ್ದು ಹೋಗಿ ಪೈಪ್​ಗಳನ್ನು ಹಿಂದಕ್ಕೆ ಕಳಿಸಿ ಕಾಮಗಾರಿ ನಿಲ್ಲಿಸಿ ಬಂದಿದ್ದೇವೆ. ಆದರೂ, ಸಹ ಹೇಮಾವತಿ ಎಇಇ ಕಾಮಗಾರಿ ಪ್ರಾರಂಭಿಸಲು ಪೊಲೀಸ್​ ಭದ್ರತೆಯನ್ನು ಕೋರಿದ್ದಾರೆ. ಯಾವುದೇ ಸರ್ಕಾರವೇ ಆಗಲಿ ಜನರ ಹಿತದೃಷ್ಟಿಯಿಂದ ಕಾರ್ಯಕ್ರಮ ಜಾರಿ ಮಾಡಬೇಕು. ಇಡೀ ಜಿಲ್ಲೆ ವಿರೋಧ ಮಾಡುವಾಗ ಒಬ್ಬ ಹೇಮಾವತಿ ಎಇಇ ಮಾಡುತ್ತೇವೆ ಎಂದರೆ ಸರ್ಕಾರದ ಆಡಳಿತದ ನಾಚಿಕೆಗೇಡಿನ ತನವಾಗಿದೆ ಎಂದರು.

ಮೂರು ಟಿಎಂಸಿ ನೀರು ನೀಡಲು ನಮ್ಮ ವಿರೋಧವಿಲ್ಲ. ಹೇಮಾವತಿ ತುಮಕೂರು ಶಾಖಾ ನಾಲೆಯನ್ನು ಸಹ 700 ಕೋಟಿ ರ್ಖಚ ಮಾಡಿ ಆಧುನೀಕರಣಗೊಳಿಸಲಾಗಿದ್ದು ಇನ್ನು ಹೆಚ್ಚುವರಿ ನೀರು ಹರಿಯಲಿದೆ. ಆದರೆ, ಸರ್ಕಾರ ಹಠಕ್ಕೆ ಬಿದ್ದು ಕೆಲವು ಶಾಸಕರಿಗೆ ಅನುಕೂಲ ಮಾಡಲು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈಗಾಗಾಲೇ ಡಿಸಿಎಂ ಶಿವಕುಮಾರ್​ ಕರೆದಿದ್ದ ಸಭೆಯಲ್ಲಿ ತಾಂತ್ರಿಕ ಸಮಿತಿ ರಚನೆಗೆ ಒತ್ತಾಯ ಮಾಡಿದ್ದೆವು. ಸಮಿತಿ ವರದಿ ಬರುವವರೆವಿಗೂ ಕಾಮಗಾರಿ ಮಾಡದಂತೆ ಸಲಹೆ ನೀಡಿದ್ದೆವು. ಆದರೆ ಸರ್ಕಾರ ಏಕಾಏಕಿ ಕೆಲಸ ಶುರು ಮಾಡುವುದು ಖಂಡನೀಯ ಎಂದರು.

500 ಟ್ರಕ್​ ಎಡೆಮಟ್ಟೆ: ಪೊಲೀಸರನ್ನು ಬಳಸಿ ಕಾಮಗಾರಿ ಮಾಡಿಸಲು ಈ ಸರ್ಕಾರ ಮುಂದಾಗಿದೆ. ಸರ್ಕಾರದ ಲಾಟಿಗೆಲ್ಲ ನಮ್ಮ ರೈತರು ಹೆದರುವುದಿಲ್ಲ. ನಾನು ಸಹ ಈ ಭಾಗದ ರೈತರಿಗೆ ಕರೆ ನೀಡುತ್ತಿದ್ದು 500 ಟ್ರಕ್​ ಎಡೆಮಟ್ಟೆ ತನ್ನಿ ಸರ್ಕಾರದ ಲಾಟಿ ಗೆಲ್ಲುತ್ತಾ ನಮ್ಮ ಎಡೆಮಟ್ಟೆ ಗೆಲ್ಲುತ್ತಾ ನೋಡೋಣ ಎಂದು ಕೃಷ್ಣಪ್ಪ ಸವಾಲು ಹಾಕಿದರು.

ಇಂತಹ ಗಲಾಟಿಗೆ ನಾವು ಸಿದ್ಧರಿದ್ದು ರೈತರು ಯಾರು ನಿಮ್ಮ ಲಾಟಿ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಈ ಕಾಮಗಾರಿ ಮಾಡುವುದಕ್ಕೆ ಬಿಡುವುದಿಲ್ಲ. ಜಿಲ್ಲೆಯ ಎಲ್ಲ ರೈತರು ಹೆಚ್ಚು ಸಂಘಟಿತರಾಗಿ ಈ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಲು ಹೋರಾಟ ಮಾಡಲು ಕರೆ ನೀಡುತ್ತೇವೆ. ಹೆದರಬೇಡಿ ರೈತರ ಜತೆ ಸದಾ ನಾನು ಇರುತ್ತೇನೆ. ರೈತರ ಮೇಲೆ ಲಾಟಿ ಪ್ರಹಾರ ನಡೆಸಿದರೆ ರೈತರು ಕೈ ಕಟ್ಟಿ ಕೂರುವುದಿಲ್ಲ. ನಾವು ಸಹ ಸಾವಿರಾರು ರೈತರು ಸೇರಿ ಎಡೆಮಟ್ಟೆ ಸೇವೆ ಮಾಡುತ್ತೇವೆ ಎಂದು ಎಚ್ಚರಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮುನಿಯೂರು ರಂಗಸ್ವಾಮಿ, ಶಿವಾನಂದ್​, ಪರಮಶಿವಯ್ಯ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net