

ಪಾತಪಾಳ್ಯ: ಸಮುದಾಯದತ್ತ ಶಾಲಾ ಕಾರ್ಯಕ್ರಮ ವಿದ್ಯಾರ್ಥಿ- ಶಿಕ್ಷಕರು- ಪಾಲಕರ ನಡುವಿನ ಕೊಂಡಿಯಾಗಿದ್ದು ಪರಸ್ಪರ ಅರಿತು ಶಿಕ್ಷಣ ಗುಣಮಟ್ಟ ಸುಧಾರಣೆಗೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಪಾತಪಾಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ವಿ.ನಿರ್ಮಲಾ ತಿಳಿಸಿದರು.
ಪಾತಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಪಾಲ್ಗೊಂಡು ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆ ಸೇರುವವರ ಸಂಖ್ಯೆ ಕುಸಿಯುತ್ತಿದೆ. ಖಾಸಗಿಯಂತೆ ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ಮಾಡಬೇಕು. ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಕಾಳಜಿ ವಹಿಸಿ ಗುಣಾತ್ಮಕ ಶಿಕ್ಷಣ ನೀಡಬೇಕು. ಇದಕ್ಕಾಗಿಯೇ ಸಮುದಾಯದ ಸಹಭಾಗಿತ್ವಕ್ಕಾಗಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಸರ್ಕಾರ ಜಾರಿ ಮಾಡುವ ಯೋಜನೆಗಳನ್ನು ಶಿಕ್ಷಣ ಇಲಾಖೆ ಕಾಲಕಾಲಕ್ಕೆ ಮಕ್ಕಳಿಗೆ ತಲುಪಿಸಬೇಕು. ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಪಡೆದುಕೊಳ್ಳಬೇಕು ಎಂದರು.
ಪ್ರಭಾರ ಮುಖ್ಯಶಿಕ್ಷಕ ಎಸ್.ಆರ್.ಸುರೇಂದ್ರಬಾಬು ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಶಿಸ್ತು ಬೆಳೆಸಿಕೊಂಡರೆ ಭವಿಷ್ಯದ ಜೀವನದಲ್ಲಿ ಉತ್ತಮವಾಗುವುದು. ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಲಿಕಾ ವಾತಾವರಣ, ಶಿಕ್ಷಕರ ಶ್ರಮ ಹಾಗೂ ಪಾಲಕರ ನಂಬಿಕೆಯ ದ್ಯೋತಕವಾಗಿದೆ. ವಿದ್ಯಾರ್ಥಿಗಳಿಗೆ ಕಲಿಯುವ ಶಾಲೆ ಮುಖ್ಯವಲ್ಲ. ಶಾಲೆಯಲ್ಲಿ ಕಲಿಕೆಯ ವಾತಾವರಣ, ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಕರ ಶ್ರಮ ಮುಖ್ಯವಾಗಿರುತ್ತದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಗಂಗಿರೆಡ್ಡಿ, ಶಿಕ್ಷಕರಾದ ಎಂ.ಎಸ್.ಶ್ರೀನಿವಾಸನ್, ದೈಹಿಕ ಶಿಕ್ಷಣ ಶಿಕ್ಷಕ ಸಿದ್ದರಾಮಣ್ಣ ಕರಿಗೌಡರ್, ಅತಿಥಿ ಶಿಕ್ಷಕ ರವಿಚಂದ್ರ, ಶಿರಿಶಾ ಹಾಗೂ ವಿದ್ಯಾರ್ಥಿಗಳಿದ್ದರು.