ಶುಚಿತ್ವ ಕಾಪಾಡಲು ಸಹಕಾರ ನೀಡಿ

SRP_03-02jpj
Published on

ಶ್ರೀರಂಗಪಟ್ಟಣ: ಸ್ವಚ್ಛ ಶ್ರೀರಂಗಪಟ್ಟಣ ಹಾಗೂ ಪುರಜನರ ಸದೃಢ ಆರೋಗ್ಯಕ್ಕಾಗಿ ತಮ್ಮ ಆರೋಗ್ಯವನ್ನೂ ಕಡೆಗಣಿಸಿ ಸ್ವಚ್ಛತೆಗೆ ಶ್ರಮವಹಿಸುವ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ಗೌರವ ಸಲ್ಲಿಸುವ ಜತೆಗೆ, ಶುಚಿತ್ವ ಕಾಪಾಡುವಲ್ಲಿ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ರಾಣಿ ತಿಳಿಸಿದರು.


ಪಟ್ಟಣದ ಪುರಸಭಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.


ಪಟ್ಟಣಗಳ ಜೀವನಾಡಿ ಪೌರಕಾರ್ಮಿಕರು ಮತ್ತು ಸ್ವಚ್ಛತಾ ವಾಹನಗಳ ಸಿಬ್ಬಂದಿ. ಇಂತಹ ಪೌರಕಾರ್ಮಿಕರು ಜಗಕೆ ಬೆಳಕು ಮೂಡುವ ವೇಳೆಗಾಗಲೇ ಸ್ವಚ್ಛತೆ ಮೂಲಕ ಸ್ವಚ್ಛಂದ ಗಾಳಿ ಹಾಗೂ ನಿರ್ಮಲ ವಾತಾವರಣವನ್ನು ಸಾರ್ವಜನಿಕರಿಗೆ ನೀಡಲು ನಿದ್ರೆಯೊಂದಿಗೆ ತಮ್ಮ ಶರೀರದ ಅಮೂಲ್ಯ ಆರೋಗ್ಯವನ್ನೂ ಕಡೆಗಣಿಸಿ ಶ್ರಮ ವಹಿಸುತ್ತಾರೆ. ಸರ್ಕಾರ ನಿಮ್ಮ ಆರೋಗ್ಯ ಕಾಳಜಿಗಾಗಿ ನೀಡಿರುವ ಸುರಕ್ಷತಾ ಪರಿಕರಗಳನ್ನು ತೊಟ್ಟು ಪೌರಕಾರ್ಮಿಕರು ನಿತ್ಯ ಕೆಲಸ ಮಾಡಬೇಕು. ಮುಖ್ಯವಾಗಿ ನಿಮ್ಮ ಕುಟುಂಬ ಸದಸ್ಯರ ಏಳಿಗೆ ಜತೆಗೆ ನಿಮ್ಮ ಮಕ್ಕಳ ಉತ್ತಮ ಶಿಕ್ಷಣಕ್ಕೂ ಕಾರ್ಮಿಕರು ಗಮನಹರಿಸಿ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


ಪುರಸಭಾ ಹಿರಿಯ ಸದಸ್ಯ ಎಂ.ಎಲ್.ದಿನೇಶ್ ಮಾತನಾಡಿ, ಪೌರಕಾರ್ಮಿಕರ ಶ್ರಮ ಮತ್ತು ಸೇವೆ ವರ್ಣಿಸಲು ಸಾಧ್ಯವಿಲ್ಲ. ಆದರೆ ನಮಗೆ ಆರೋಗ್ಯಯುತ ವಾತಾವರಣ ನಿರ್ಮಿಸಿ ಯಾರೂ ದುಶ್ಚಟಗಳಿಗೆ ಒಳಗಾಗಿ, ಅನಾರೋಗ್ಯಕ್ಕೆ ಸಿಲುಕದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು.
ಪೌರಕಾರ್ಮಿಕರು, ನೀರುಗಂಟಿಗಳು ಹಾಗೂ ವಾಹನ ಚಾಲಕರನ್ನು ಸನ್ಮಾನಿಸಲಾಯಿತು.


ವಿವಿಧ ಕ್ರೀಡಾಕೂಟದಲ್ಲಿ ಜಯಗಳಿಸಿದ್ದ ಪೌರಕಾರ್ಮಿಕ ಸಿಬ್ಬಂದಿಗೆ ವಿಶೇಷ ಬಹುಮಾನ ವಿತರಿಸಲಾಯಿತು.
ಪುರಸಭಾ ಸದಸ್ಯರಾದ ವಸಂತಕುಮಾರಿ, ಮಂಗಳಮ್ಮ, ದಯಾನಂದ, ಪರಿಸರ ಇಂಜಿನಿಯರ್ ಸಹನಾ, ವ್ಯವಸ್ಥಾಪಕ ಸೋಮಶೇಖರ್, ಆರೋಗ್ಯ ನೀರಿಕ್ಷಕಿ ಚಂಪಾಶ್ರೀ, ಸಿಬ್ಬಂದಿ ಮಂಜೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net