ಹೆಬ್ರಿಗಿಲ್ಲ ಸಬ್ ರಿಜಿಸ್ಟ್ರಾರ್ ಕಚೇರಿ: ಕೂಡಲೇ ಮಂಜೂರಾತಿಗೆ ಒತ್ತಾಯ; ಗ್ರಾಮೀಣ ಜನರಿಗೆ ಸಮಸ್ಯೆ

sub registrar office
Published on

ನರೇಂದ್ರ ಎಸ್.ಮರಸಣಿಗೆ

ಹೆಬ್ರಿ ತಾಲೂಕು ಕೇಂದ್ರವಾಗಿ 5 ವರ್ಷ ಸಂದಿದೆ. ಆದರೆ ಅನೇಕ ಪ್ರಮುಖ ಇಲಾಖೆಗಳು ಕಾರ್ಕಳದಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಹೆಬ್ರಿ ಜನರ ಗೋಳು ಹೇಳತಿರದು. ಅದರಲ್ಲೂ ಪ್ರಮುಖವಾದ ಸಬ್ ರಿಜಿಸ್ಟ್ರಾರ್ ಆಫೀಸ್ ಹೆಬ್ರಿಗೆ ಅಗತ್ಯವಾಗಿ ಬೇಕಿದೆ.

ತಾಲೂಕಿನ ಜನ 3 ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಹೆಬ್ರಿಯಿಂದ ಬ್ರಹ್ಮಾವರ ಸಬ್ ರಿಜಿಸ್ಟ್ರಾರ್ ಕಚೇರಿಗೆ 30 ಕೀ.ಮೀ, ಶಂಕರನಾರಾಯಣಕ್ಕೆ 32 ಹಾಗೂ ಕಾರ್ಕಳಕ್ಕೆ 35 ಕೀಮಿ ದೂರವಿದೆ. ಸಣ್ಣ ಕೆಲಸವಿದ್ದರೂ ಒಂದು ದಿನ ರಜೆ ಮಾಡಬೇಕಾದ ಪರಿಸ್ಥಿತಿ. ಗ್ರಾಮೀಣ ಭಾಗದ ಜನರು ಯಾವುದೇ ಕೆಲಸಕ್ಕೆ ಹೋದರು ಸರ್ವರ್ ಸಮಸ್ಯೆ. ದಿನಗೂಲಿ ಕೆಲಸಗಾರರು ರಜೆ ಮಾಡಿ ಹೋದರು ಸರ್ವರ್ ಸಮಸ್ಯೆಯಿಂದ ವಾಪಸ್ ಬರಬೇಕಗಿದೆ.

ಭೂಮಿ ನೋಂದಣಿ, ಅಡಮಾನ ಸಾಲ, ಮರಣ ಶಾಸನ, ದಾಖಲೆಗಳ ಕ್ರೋಡೀಕರಣಕ್ಕೆ ಸಮಸ್ಯೆಯಾಗಿದೆ. ಶಂಕರನಾರಾಯಣ, ಬ್ರಹ್ಮಾವರ, ಉಡುಪಿ ಹಾಗೂ ಕಾರ್ಕಳ ಸಬ್ ರಿಜಿಸ್ಟ್ರಾರ್‌ಗೆ ಶತಮಾನಗಳು ಕಳೆದಿವೆ. ಈ ಭಾಗದಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ರಚನೆ ಮಾಡಿದ ನಂತರ ಸ್ವಾತಂತ್ರೃ ಭಾರತದ ಯಾವುದೇ ಸಬ್ ರಿಜಿಸ್ಟರ್ ಕಚೇರಿ ತೆರೆದಿಲ್ಲ.

ಕೊಠಡಿ ನಿಷ್ಪ್ರಯೋಜಕ

ಹೆಬ್ರಿ ತಾಲೂಕು ಕಚೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗೆ 2 ಕೊಠಡಿ ಮೀಸಲಿರಿಸಲಾಗಿದ್ದು ಸಬ್ ರಿಜಿಸ್ಟಾರ್ ಕಚೇರಿ ಮಂಜೂರುಗೊಳಿಸುವಂತೆ ಸಾಮಾಜಿಕ ಹೋರಾಟಗಾರರ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

ಚಾರ ಕಂದಾಯ ವೃತ್ತ ರಚನೆ

ಹೆಬ್ರಿ ತಾಲೂಕಿನ ಚಾರ ಮತ್ತು ಹೆಬ್ರಿ ಗ್ರಾಮಕ್ಕೆ ಈ ಹಿಂದೆ 3 ಸಾವಿರ ಜನಸಂಖ್ಯೆ ಇರುವಾಗ 1 ಕಂದಾಯ ವೃತ್ತ ಆರಂಭಿಸಲಾಗಿದ್ದು ಈಗ 2 ಗ್ರಾಮಗಳ ಒಟ್ಟು ಜನಸಂಖ್ಯೆ 13 ಸಾವಿರ ಆಗಿದೆ. ಕಂದಾಯ ಇಲಾಖೆಗಳ ಕಡತ ಹೆಚ್ಚಾಗಿವೆ, ವಿಲೇವಾರಿ ವಿಳಂಬವಾಗುತ್ತಿದೆ. ಹಾಗಾಗಿ ಚಾರ ಗ್ರಾಮಕ್ಕೆ ಪ್ರತ್ಯೇಕ ಕಂದಾಯ ವೃತ್ತ ಆರಂಭಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಲೂಕಿನ 3 ಗ್ರಾಮಗಳು ಇರುವುದರಿಂದ ಕಾರ್ಯ ಒತ್ತಡ ಹೆಚ್ಚಿದೆ.

ಹೆಬ್ರಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಬೇಡಿಕೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ತಮಗೆ ಹತ್ತಿರವಾದ ಸ್ಥಳಗಳಲ್ಲಿ ಜಿಲ್ಲೆಯ ಜನರು ಸಬ್ ರಿಜಿಸ್ಟ್ರಾರ್ ಕಚೇರಿ ಸೌಲಭ್ಯ ಪಡೆಯುವಂತ ವ್ಯವಸ್ಥೆ ನಿರ್ಮಾಣವಾಗಲಿದೆ.-ಡಾ.ಕೆ.ವಿದ್ಯಾ ಕುಮಾರಿ ಉಡುಪಿ ಜಿಲ್ಲಾಧಿಕಾರಿ

ಹೆಬ್ರಿಯ ಗ್ರಾಮೀಣ ಭಾಗದ ಜನರು ಸಬ್ ರಿಜಿಸ್ಟ್ರಾರ್ ಕಚೇರಿ ಸವಲತ್ತು ಪಡೆಯಲು ದೂರದ ಕಾರ್ಕಳ ಶಂಕರನಾರಾಯಣ, ಬ್ರಹ್ಮಾವರಕ್ಕೆ ಹೋಗಬೇಕು. ನೋಂದಣಿ ಕೆಲಸಕ್ಕಾಗಿ ಕಚೇರಿ ಅಲೆಯುವುದು ತಪ್ಪಿಲ್ಲ. ಯಾವಾಗ ಕೇಳಿದರೂ ಸರ್ವರ್ ಬ್ಯುಸಿ ಎನ್ನುತ್ತಾರೆ. ಕೆಲವೊಮ್ಮೆ ಜನರು ಹೋಗಿ ಬರಿ ಕೈಯಲ್ಲಿ ವಾಪಸ್ ಬರುವುದೂ ಇದೆ. ಹೆಬ್ರಿಯನ್ನು ಕೇಂದ್ರವಾಗಿಟ್ಟುಕೊಂಡು ಸ್ಥಳೀಯ ಗ್ರಾಮಗಳನ್ನೊಡಗೂಡಿಸಿ ಶೀಘ್ರದಲ್ಲಿ ಸೇವೆ ನೀಡಬೇಕು.-ನೀರೆ ಕೃಷ್ಣಶೆಟ್ಟಿ ಸಾಮಾಜಿಕ ಹೋರಾಟಗಾರ

ಹೆಬ್ರಿ ತಾಲೂಕಿನಲ್ಲಿ ಬರುವ ಗ್ರಾಮಗಳನ್ನು ಕ್ರೋಡಿಕರೆಸಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ಕಂದಾಯ ಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುವುದು.-ಕೋಟ ಶ್ರೀನಿವಾಸ ಪೂಜಾರಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net