ಅಪಾಯದ ತೂಗುಗತ್ತಿಯಲ್ಲಿ ಹೆಬ್ರಿ ಠಾಣೆ

police station
ಸುರಕ್ಷೆ ಕೊರತೆಯಿರುವ ಹೆಬ್ರಿ ಪೊಲೀಸ್ ಠಾಣೆ.
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ ನಕ್ಸಲ್ ಎನ್‌ಕೌಂಟರ್, ಕೂಂಬಿಂಗ್‌ನಿಂದ ಹೆಚ್ಚು ಸದ್ದುಮಾಡುತ್ತಿರುವ ಹೆಬ್ರಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಗರಿಷ್ಠ ಸುರಕ್ಷತೆ ಅಗತ್ಯವಿದೆ. ಹಳೇ ಪೊಲೀಸ್ ಠಾಣೆ ಹೆಬ್ರಿಯ ಹೃದಯಭಾಗದಲ್ಲಿತ್ತು. ಆದರೆ ಹೊಸದಾಗಿ ನಿರ್ಮಾಣವಾದ ಠಾಣೆ ಕಾಡಿನಲ್ಲಿದೆ. ಸುತ್ತಲೂ ಅರಣ್ಯಪ್ರದೇಶವೇ ಇದ್ದು, ಸೂಕ್ತ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸಬೇಕಾಗಿದೆ ಈಗ ಇರುವ ವಾಹನ ಹಾಳಾಗಿದ್ದು, ಗಸ್ತು ತಿರುಗುವಿಕೆ, ನಿರಂತರ ಓಡಾಟ ಇರುವುದರಿಂದ ಗುಣಮಟ್ಟದ ಹಾಗೂ ಹೆಚ್ಚು ವಾಹನ ವ್ಯವಸ್ಥೆ ಪೊಲೀಸರಿಗೆ ದೊರೆಯಬೇಕಿದೆ. ಈಗ ಇರುವ ಪೊಲೀಸ್ ಕ್ವಾರ್ಟರ್ಸ್ ಕೂಡ ಹಳೆಯದಾಗಿದ್ದು, ಉತ್ತಮ ದರ್ಜೆಯ ಪೊಲೀಸ್ ಕ್ವಾರ್ಟರ್ಸ್ ಅಗತ್ಯವಿದೆ. ಠಾಣೆ ವ್ಯಾಪ್ತಿ ಸೂಕ್ಷ್ಮಪ್ರದೇಶವಾಗಿ ಗುರುತಿಸಲ್ಪಡುತ್ತಿದ್ದು, ಇಲ್ಲಿ ಅನಾಹುತಗಳ ಪತ್ತೆಹಚ್ಚುವಿಕೆ ಹಾಗೂ ತಡೆಗಟ್ಟಲು ಸಿಸಿಟಿವಿ ಅಳವಡಿಕೆ ಅಗತ್ಯವಿದೆ. ಹೆಬ್ರಿ ನಗರವಿಡೀ ಕಣ್ಗಾವಲಿಡಲು ಸಾಧ್ಯವಾಗುವಂತೆ ಸಿಸಿಟಿವಿಗಳನ್ನು ಅಳವಡಿಸಬೇಕಿದೆ. ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಸಮಾಜಘಾತುಕ, ನಕ್ಸಲ್ ಚಟುವಟಿಕೆಗಳು ಹೆಚ್ಚಿದ್ದು, ಅವರು ಬಳಸುವ ಶಸ್ತ್ರಾಸ್ತ್ರಗಳು ಪೊಲೀಸ್ ಇಲಾಖೆಗೆ ಹೋಲಿಸಿದರೆ ಅತ್ಯಾಧುನಿಕವಾಗಿದೆ. ಪೊಲೀಸರಿಗೆ ಕಾರ್ಯಾಚರಣೆ ಸಂದರ್ಭ ಇವುಗಳನ್ನು ಎದುರಿಸಲು ಕಷ್ಟವಾಗುತ್ತಿದ್ದು, ಸರ್ಕಾರ ಖಾಕಿ ಪಡೆಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸುವ ಅಗತ್ಯವಿದೆ.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಹೆಬ್ರಿ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆ. ಶೀಘ್ರವೇ ಈ ಕೊರತೆ ನೀಗಿಸಲು, ಸಿಬ್ಬಂದಿ ನಿಯೋಜನೆಗೊಳ್ಳಬೇಕಿದೆ. ಗುಪ್ತಚರ ಮಾಹಿತಿ ಸಂಗ್ರಹ, ನಿರಂತರ ಪೊಲೀಸ್ ಪ್ಯಾಟ್ರೋಲಿಂಗ್ ಮೂಲಕ ಮಾಹಿತಿ ಕಲೆಹಾಕಲು ಹೆಚ್ಚುವರಿ ಸಿಬ್ಬಂದಿ ಅಗತ್ಯ. ಇದರಿಂದ ಠಾಣೆಗೆ ಸೂಕ್ತ ರಕ್ಷಣೆಯೂ ಸಾಧ್ಯಬಾಗುತ್ತದೆ. ಈ ಮೊದಲು ಇಲಾಖೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ವಿಶೇಷ ಪೊಲೀಸ್ ಪಡೆ (ವಿಲೇಜ್ ಪ್ರೊಟೆಕ್ಷನ್ ಗ್ರೂಪ್) ಅನ್ನು ಈಗ ಹಿಂತೆಗೆದುಕೊಳ್ಳಲಾಗಿದೆ. ಪೊಲೀಸ್ ಔಟ್‌ಪೋಸ್ಟ್ ಕೂಡ ಹೆಬ್ರಿಗೆ ಅವಶ್ಯ.

ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಹೆಬ್ರಿ ಪೊಲೀಸ್ ಠಾಣೆಗೆ ವಿಶೇಷ ರಕ್ಷಣೆ ಒದಗಿಸುವ ಬಗ್ಗೆ ಯೋಚಿಸಿ ಕ್ರಮ ಜರುಗಿಸಲಾಗುವುದು. ಡಾ.ಅರುಣ್ ಕೆ ಪೊಲೀಸ್ ಅಧಿಕ್ಷಕ ಹೆಬ್ರಿ ಪೊಲೀಸ್ ಠಾಣೆಯ ಬಲವರ್ಧನೆ ಆಗಬೇಕು. ಮುಂದಿನ ದಿನಗಳಲ್ಲಿ ನಕ್ಸಲರು ಪ್ರತೀಕಾರದ ಉದ್ದೇಶದಿಂದ ಅವಘಡ ಉಂಟುಮಾಡುವ ಸಾಧ್ಯತೆ ಇದೆ. ಠಾಣೆಗೆ ಸುಸಜ್ಜಿತ ಶಸ್ತ್ರಗಳ ಪೂರೈಕೆ, ಸೂಕ್ತ ವಾಹನ, ವಿಪಿಜಿ ಫೋರ್ಸ್ ನೀಡುವ ಮೂಲಕ ಹೆಬ್ರಿ ಪೊಲೀಸರಿಗೆ ಬಲ ನೀಡಬೇಕು. ಕಾಡು ಆವರಿಸಿರುವುದರಿಂದ ಪೊಲೀಸರಿಗೂ ಅಪಾಯಗಳಿವೆ. ಹರೀಶ್ ಶೆಟ್ಟಿ ನಾಡ್ಪಾಲು, ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net