ಹೆಬ್ಬಗೋಡಿ ಮರ್ಡರ್ ಕೇಸ್: 'ಮಚ್ಚಾ' ಎಂದು ಕರೆದಿದ್ದಕ್ಕೆ ಬಿತ್ತು ಇಬ್ಬರ ಹೆಣ

db pic
Published on

ಆನೇಕಲ್: ಹೆಬ್ಬಗೋಡಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಿಂಗೇನ ಅಗ್ರಹಾರದಲ್ಲಿ ನಡೆದ ಜೋಡಿ ಕೊಲೆ ಬೆಚ್ಚಿಬೀಳಿಸುವಂತಿತ್ತು.
ಸಂಪಿಗೆ ನಗರದ ರವಿಕುಮಾರ್, ಅಸ್ಸಾಂ ಮೂಲದ ಚಂದನ್ ಕೊಲೆಯಾಗಿದ್ದರು. ಕೊಲೆ ಆರೋಪಿಗಳಾದ ಮಹಮ್ಮದ್ ಅಬ್ದುಲ್ ಕರೀಂ ಹಾಗೂ ದಾರುಲ್ ಆಲಂ ಲಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ:
ಆರೋಪಿಗಳಾದ ಮಹಮ್ಮದ್ ಅಬ್ದುಲ್ ಕರೀಂ ಮತ್ತು ದಾರುಲ್ ಆಲಂ ಲಸ್ಕರ್ ಇಬ್ಬರು ಅಸ್ಸಾಂ ಮೂಲದವರು. ಸೆಪ್ಟೆಂಬರ್ ಒಂದನೇ ತಾರೀಕಿನಂದು ನಿರ್ಜನ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ರವಿಕುಮಾರ್, ಚಂದನ್, ಅಬ್ದುಲ್ ಕರೀಂ ಮೂವರು ಒಟ್ಟಿಗೆ ಪಾರ್ಟಿ ಮಾಡಲು ಹೊರಟಿದ್ದರು. ಈ ವೇಳೆ ಪಾರ್ಟಿ ಮಾಡುವ ಸ್ಥಳಕ್ಕೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ ದಾರುಲ್ ಆಲಂ ಲಸ್ಕರ್ ನನ್ನು ಕರೆಸಿಕೊಂಡಿದ್ದಾರೆ.

ಕುಡಿದ ಮತ್ತಿನಲ್ಲಿ ಮಹಮ್ಮದ್ ಅಬ್ದುಲ್ ಕರೀಂ, ರವಿಕುಮಾರ್ ನನ್ನು ಮಚ್ಚಾ ಎಂದು ಕರೆದಿದ್ದಾನೆ. ಇದಕ್ಕೆ ರವಿಕುಮಾರ್ ನನ್ನನ್ನೇ 'ಮಚ್ಚಾ' ಎನ್ನುತ್ತೀಯಾ ಎಂದು ಸಿಟ್ಟಿಗೆದ್ದು ಹೊಡೆದಿದ್ದಾನೆ. ರವಿಕುಮಾರ್ ಸ್ಥಳೀಯ ಎನ್ನುವ ಕಾರಣಕ್ಕೆ ತನ್ನ ಹವಾ ಮೆಂಟೇನ್ ಮಾಡುವ ಸಲುವಾಗಿ ಹಲ್ಲೆ ಮಾಡಿದ್ದಾನೆ.

ಪಾರ್ಟಿ ಬಳಿಕ ಕೊಲೆ:

ಎಣ್ಣೆ ಪಾರ್ಟಿಯ ಬಳಿಕ ರವಿಕುಮಾರ್ ಹಾಗೂ ಚಂದನ್ ಫುಲ್ ಟೈಟ್ ಆಗಿದ್ದರು. ರವಿಕುಮಾರ್, ಅಬ್ದುಲ್ ಕರೀಂಗೆ ಹೊಡೆದಿದ್ದಕ್ಕೆ ಸಿಟ್ಟಾಗಿ ದೊಣ್ಣೆ ಹಾಗೂ ಚಾಕುವಿನಿಂದ ಹೊಡೆದು ರವಿಕುಮಾರ್ ಮತ್ತು ಚಂದನ್ ರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ನಂತರ ರವಿಕುಮಾರ್​​ನ ಪಲ್ಸರ್ ಬೈಕ್ ಸಮೇತ ಕರೀಂ ಎಸ್ಕೇಪ್ ಆಗಿದ್ದಾನೆ. ಇತ್ತ ಸೆಕ್ಯೂರಿಟಿ ಗಾರ್ಡ್ ಆಗಿದ್ದ ದಾರುಲ್ ಆಲಂ, ತನ್ನ ಅಣ್ಣ ಇರುವ ಹೀಲಲಿಗೆಯ ಮನೆ ಸೇರಿಕೊಂಡಿದ್ದನು.

ಬೆಂಗಳೂರಿನ ಕಾಡುಗೋಡಿಯಲ್ಲಿ ಪಲ್ಸರ್ ಬೈಕ್ ಮಾರಾಟ ಮಾಡಿದ್ದ ಕರೀಂ, ಬಳಿಕ ಅಸ್ಸಾಂಗೆ ಎಸ್ಕೇಪ್ ಆಗಲು ಸಕಲ ಸಿದ್ಧತೆ ಮಾಡಿಕೊಂಡಿದ್ದನು. ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ಬೆನ್ನುಹತ್ತಿದ್ದ ಪೊಲೀಸರಿಗೆ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ. ಕೊಲೆಯಾದ ಚಂದನ್ ಗಾಂಜಾ ವ್ಯಸನಿಯಾಗಿದ್ದು, ಕೊಲೆಯ ಪ್ರಮುಖ ಆರೋಪಿ ಮಹಮ್ಮದ್ ಅಬ್ದುಲ್ ಕರೀಂ ದೊಡ್ಡ ನಾಗಮಂಗಲದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net