

ಹಿರೀಸಾವೆ: ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಹೆಬ್ಬಾರಮ್ಮ ದೇವಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಹಿರೀಸಾವೆ ಹಾಗೂ ದೇವಿಯ ತವರುಮನೆ ಹೊನ್ನೇನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾನುವಾರ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಉತ್ಸವದ ಬೀದಿಗಳಿಗೆ ರಂಗೋಲಿ ಬಿಡಿಸಿ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿದ್ದರು. ಮೆರವಣಿಗೆ ಸಾಗಿದಂತೆಲ್ಲ ಈಡಾಗಾಯಿ ಹಾಕಿ ಕರ್ಪೂರ ಬೆಳಗಿದರು. ಹೊನ್ನೇನಹಳ್ಳಿ ಗ್ರಾಮಕ್ಕೆ ದೇವಿಯು ಆಗಮಿಸಿದಾಗ ಗಂಧದ ಧೂಪದೊಂದಿಗೆ ಸ್ವಾಗತಿಸಿದರು. ದೇವರು ಸಾಗುವ ದಾರಿಯುದ್ದಕ್ಕೂ ಹೂವನ್ನು ಹಾಕಿ ಮೆರವಣಿಗೆ ನಡೆಸಿದರು. ಸಾವಿರಾರು ಭಕ್ತರು ಮಡಿಲಕ್ಕಿ ಹರಕೆಯ ವಸ್ತುಗಳನ್ನು ದೇವಿಗೆ ಅರ್ಪಿಸಿದರು. ಬೆಳಗ್ಗೆ ಹಿರೀಸಾವೆಯ ಕೆರೆಯ ಮುಂದೆ ಇರುವ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಯಿತು. ಬರಿಗಾಲಿನಲ್ಲಿ ದೇವರ ಹಿಂದೆ ಭಕ್ತರ ನಡಿಗೆ ಹಾಕಿದರು. ಭಕ್ತರು ದೇವಿಗೆ ಹಲವು ಧಾನ್ಯಗಳನ್ನು ಪಡಿ ರೂಪದಲ್ಲಿ ನೀಡಿದರು.
ದೇವರಿಂದ ಹೊಂಬಾಳೆಯನ್ನು ಪ್ರಸಾದವಾಗಿ ಸ್ವೀಕರಿಸಿದರು. ಎರಡು ಗ್ರಾಮಗಳಲ್ಲಿ ಒಂದು ವಾರ ಚೌಡೇಶ್ವರಿ ಹಬ್ಬವನ್ನು ಆಚರಿಸುತಿದ್ದು ಭಾನುವಾರ ಹೆಬ್ಬಾರಮ್ಮನ ಹಬ್ಬದ ಆಚರಣೆ ನಡೆಯಿತು. ಎರಡು ಗ್ರಾಮಗಳಲ್ಲಿ ದೇವಿಯ ಉತ್ಸವ ಮತ್ತು ದರ್ಶನ ಪಡೆಯುವವರೆಗೆ ಉಪವಾಸ ಮಾಡಿ ನಂತರ ಊಟ ಮಾಡಿದರು. ವರ್ಷದಲ್ಲಿ ಒಂದು ದಿವಸ ಮಾತ್ರ ಅಂದರೆ ಗ್ರಾಮ ದೇವತೆಯ ಹಬ್ಬದ ಆಚರಣೆಯಲ್ಲಿ ಭಾನುವಾರದಂದು ಹೆಬ್ಬಾರಮ್ಮ ದೇವರು ತವರು ಮನೆಯಾದ ಹೊನ್ನೇನಹಳ್ಳಿಗೆ ಮೆರವಣಿಗೆಯಲ್ಲಿ ಹೋಗುತ್ತದೆ.
ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿ ಭಕ್ತರಿಗೆ ದರ್ಶನ ನೀಡಿ ಸಂಜೆ ವೇಳೆಗೆ ಹಿರೀಸಾವೆ ಗ್ರಾಮಕ್ಕೆ ಹಿಂದಿರುಗುತ್ತದೆ.ಉತ್ಸವದಲ್ಲಿ ಹಿರೀಸಾವೆ ಹಾಗೂ ಹೊನ್ನೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.