

ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್-ಕಂಪ್ಲಿ ಸಂಪರ್ಕದ ಸೇತುವೆ ಅಧುನೀಕರಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರೀಯ ಸಮಿತಿ ತಾಲೂಕು ಸಮಿತಿ ಸದಸ್ಯರು ನಗರದ ಲೋಕೋಪಯೋಗಿ ಇಲಾಖೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ನಗರ ಮತ್ತು ಗ್ರಾಮೀಣ ಭಾಗದ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಎಇಇ ವಿಶ್ವನಾಥ ಅವರಿಗೆ ಸಲ್ಲಿಸಿದರು.
ಸಮಿತಿ ತಾಲೂಕು ಅಧ್ಯಕ್ಷ ಮೈನುದ್ದೀನ್ ಮಾತನಾಡಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಸಂಪರ್ಕದ ಏಕೈಕ ಸೇತುವೆಯಾಗಿದ್ದು, ಶೇ.75 ಭಾಗ ಕೊಪ್ಪಳ ಜಿಲ್ಲೆಗೆ ಒಳಪಡಲಿದೆ.
ಇದನ್ನು ಓದಿ: ರಸ್ತೆ ಸಂಚಾರದಿಂದ ನರಕಯಾತನೆ: ದುರಸ್ತಿಗೆ ಮನವಿ
ಅತ್ಯಂತ ಹಳೆಯದಾಗಿರುವುದರಿಂದ ಶಿಥಿಲಗೊಂಡಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಪ್ರತಿ ಮಳೆಗಾಲದಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟರೇ ಸೇತುವೆ ಮುಳುಗಡೆಯಾಗುತ್ತಿದೆ. ಹೊಸ ಸೇತುವೆಗಾಗಿ ಪ್ರಸ್ತಾವನೆ ಸಲ್ಲಿಸಿ ಅನುಮತಿ ಸಿಕ್ಕಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದುವರೆಗೂ ಸಾಕಾರಗೊಂಡಿಲ್ಲ.
ಭಾರಿ ವಾಹನಗಳ ಓಡಾಟ ನಿಷೇಧವಿದ್ದರೂ, ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ಕಣ್ಣು ತಪ್ಪಿಸಿ ಸಂಚರಿಸುತ್ತಿವೆ. ಹೊಸ ಸೇತುವೆ ನಿರ್ಮಿಸುವವರೆಗೂ ಹಳೇ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸುವಂತೆ ಒತ್ತಾಯಿಸಿದರು.