ನಾಳೆ ಅಂಥ ಅಗತ್ಯವಿದ್ರೆ ಮಾತ್ರ ರಸ್ತೆಗಿಳಿಯಿರಿ; ಅರ್ಧ ಬೆಂಗಳೂರಿಗೇ ಬಿಗಿ ಭದ್ರತೆ, ಹಲವೆಡೆ ಸಂಚಾರ ನಿರ್ಬಂಧ

bangalore april
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರು ನಾಳೆ ಅಂಥ ಅಗತ್ಯವಿದ್ದರೆ ಮಾತ್ರ ರಸ್ತೆಗಿಳಿಯಿರಿ. ಏಕೆಂದರೆ ನಾಳೆ ಹೆಚ್ಚೂಕಮ್ಮಿ ಅರ್ಧ ಬೆಂಗಳೂರಿಗೇ ಬಿಗಿ ಭದ್ರತೆ ಇರಲಿದೆ. ಮಾತ್ರವಲ್ಲ, ನಗರದ ಹಲವೆಡೆ ಸಂಚಾರ ನಿರ್ಬಂಧ ಇರಲಿದ್ದು, ಕಟ್ಟುನಿಟ್ಟಿನ ನಿಯಮ ಪಾಲನೆ ಆಗಲಿದೆ.

ಸಿಲಿಕಾನ್ ಸಿಟಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಬರುವ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜತೆಗೆ ಪ್ರಧಾನಿ ಸುಗಮ ಸಂಚಾರ ಮತ್ತು ಭದ್ರತೆ ಸಲುವಾಗಿ ಸಾರ್ವಜನಿಕ ವಾಹನ ಸಂಚಾರ ಮಾರ್ಗ ಮಾರ್ಪಾಡು ಮಾಡಿ ಪರ್ಯಾಯ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಲ್ಪಿಸಿದೆ.

ಬೆಳಗ್ಗೆ 11.55ಕ್ಕೆ ಯಲಹಂಕ ವಾಯುನೆಲೆಗೆ ಬಂದಿಳಿಯುವ ಪ್ರಧಾನಿ ಭಾರತೀಯ ವಿಜ್ಞಾನ ಸಂಸ್ಥೆ, ಜ್ಞಾನಭಾರತಿ ಆವರಣದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್​ ಎಕನಾಮಿಕ್ ಮತ್ತು ಕೊಮ್ಮಘಟ್ಟದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಸಂಚರಿಸುವ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಂಗಳೂರು ನಗರ ಪೊಲೀಸ್, ಸಿಐಡಿ, ಕೆಎಸ್‌ಆರ್‌ಪಿ, ಸಿಎಆರ್, ಗರುಡ ಪಡೆಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಪ್ರಧಾನಿ ಸಂಚರಿಸುವ ಮಾರ್ಗ ಉದ್ದಕ್ಕೂ ಪೊಲೀಸರನ್ನು ಭಾನುವಾರವೇ ಸಂಚಾರ ಮತ್ತು ಸಿವಿಲ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಪ್ರಧಾನಿ ಬಂದಾಗ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆ. ಇದರ ಆಧಾರದ ಮೇಲೆ ಅಗತ್ಯ ಇರುವ ಕಡೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

  • ಬೆಳಗ್ಗೆ 11 ರಿಂದ 1 ಗಂಟೆವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಬರುವರು ಕಾವೇರಿ ವೃತ್ತ, ಮೇಖ್ರಿವೃತ್ತ ಮತ್ತು ಹೆಬ್ಬಾಳ ಫ್ಲೈಓವರನ್ನು ಬಳಸಬೇಡಿ.
  • ಮಧ್ಯಾಹ್ನ 12.30ರಿಂದ 2.30ರವರೆಗೆ ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಬೆಂಗಳೂರು ಕಡೆಗೆ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
  • ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.
  • ಮಧ್ಯಾಹ್ನ 1 ರಿಂದ 3.30ವರೆಗೆ ಕೊಮ್ಮಘಟ್ಟ ಮತ್ತು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಧಾನಿ ಕಾರ್ಯಕ್ರಮ ಇರುವ ಕಾರಣ ಭದ್ರತೆ, ಸುಗಮ ಸಂಚಾರ ಸಲುವಾಗಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಶಾಲಾ, ಕಾಲೇಜು ಆಡಳಿತ ಮಂಡಳಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net