

ಬೆಂಗಳೂರು: ಮುಂಗಾರು ಪ್ರಬಲಗೊಂಡ ಪರಿಣಾಮ ಹಲವು ದಿನಗಳಿಂದ ರಾಜಧಾನಿಯಲ್ಲಿ ಕ್ಷೀಣಿಸಿದ್ದ ಮಳೆ ಭಾನುವಾರ ಬಿರುಸಾಗಿ ಸುರಿದಿದೆ. ಜಯನಗರದ 4ನೇ ಹಂತದಲ್ಲಿ ಬೃಹತ್ ಮರ ಬಿದ್ದು ಕಾರು, ಆಟೋ ಜಖಂಗೊಂಡಿದೆ. ಆಟೋ ನಿಲ್ಲಿಸಿ ಕಾಫಿ ಕುಡಿಯಲು ತೆರಳಿದ್ದ ಹಿನ್ನೆಲೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಸುರಿದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು. ಇದರಿಂದಾಗಿ ದೈನಂದಿನ ಕಾರ್ಯಗಳಿಗೂ ಅಡ್ಡಿ ಉಂಟಾಯಿತು. ಕೆ.ಆರ್. ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಬಿಟಿಎಂ ಲೇಔಟ್, ಕೆ.ಆರ್. ಪುರ, ಮೈಸೂರು ರಸ್ತೆ, ಕೆಂಗೇರಿ, ಚಾಮರಾಜಪೇಟೆ, ಬಸವನಗುಡಿ, ಆರ್.ಟಿ. ನಗರ, ಸಹಕಾರನಗರ, ಜಯನಗರ, ಬಸವನಗುಡಿ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ದಾಸರಹಳ್ಳಿ, ಪೀಣ್ಯ, ನೆಲಮಂಗಲ, ಹೆಬ್ಬಾಳ, ಯಲಹಂಕ ವೈಟ್‌ಪೀಲ್ಡ್ ಹಾಗೂ ಸರ್ಜಾಪುರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು.
ನಗರದ ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ತುಸು ಮಳೆನೀರು ನಿಂತಿತ್ತು. ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾಹನಸವಾರರು ಮಳೆಯಲ್ಲಿಯೇ ನೆನೆದುಕೊಂಡು ತೆರಳುತ್ತಿದ್ದರು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ತುಸು ಸಂಚಾರ ಸಿಕ್ಕು ಉಂಟಾಯಿತು. ಸಂಜೆ ವೇಳೆ ಮನೆಗೆ ತೆರಳುವ ಧಾವಂತದಲ್ಲಿ ಕೆಲವರು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಮರ,ಕೊಂಬೆ ಬಿದ್ದಿರುವ ಕುರಿತು ಬಿಬಿಎಂಪಿ ಸಹಾಯವಾಣಿಗೆ ದೂರು ದಾಖಲಾಯಿತು. ಸೂಕ್ತ ವ್ಯಾಪಾರ ಇಲ್ಲದೆ ಬೀದಿಬದಿ ವ್ಯಾಪಾರಿಗಳಿಗೆ ನಷ್ಟವಾಯಿತು. ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದವರಿಗೆ ಅಡಚಣೆಯಾಯಿತು.
ಐದು ದಿನ ಸಾಧಾರಣ: ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 3 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 20 ಡಿ.ಸೆ. ಇರಲಿದೆ. ಕೆಲ ಬಡಾವಣೆಗಳಲ್ಲಿ ಮಳೆಗಿಂತ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ. ಇನ್ನೂ ಕೆಲವೆಡೆ ಜೋರಾಗಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಬಿಳೇಕಹಳ್ಳಿ 26, ಸಂಪಂಗಿರಾಮನಗರ 22, ಕಾಟನ್‌ಪೇಟೆ 18, ಹೇರೋಹಳ್ಳಿ 16, ಹಂಪೆನಗರ 16, ಮಾರತ್ತಹಳ್ಳಿ 15, ಎಚ್‌ಎಎಲ್ ವಿಮಾನ ನಿಲ್ದಾಣ 15, ವನ್ನರ್‌ಪೇಟೆ 15, ಬೊಮ್ಮನಹಳ್ಳಿ 13, ಮಾರುತಿ ಮಂದಿರ 13, ನಾಗಪುರ 12, ಅರಕೆರೆ 11, ಬಸವೇಶ್ವರನಗರ 11, ವಿಶ್ವೇಶ್ವರಯ್ಯಪುರ 10, ರಾಜಾಜಿನಗರ 10 ಮಿಮೀ ಮಳೆಯಾಗಿದೆ.