ದಕ್ಷಿಣ ಕರ್ನಾಟಕದಲ್ಲಿ 3 ದಿನ ಮಳೆ ಜೋರು: ಉತ್ತರ ಕರ್ನಾಟಕದಲ್ಲಿ ಕ್ಷೀಣ

raichur
raichur
Published on

ಬೆಂಗಳೂರು:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವು ಪ್ರದೇಶಗಳಲ್ಲಿ ಮುಂದಿನ 3 ದಿನ ಗುಡುಗಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಚಾಮರಾಜನಗರದ ಎಂ.ಎಂ.ಹಿಲ್ಸ್ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ಗುಡುಗು ಸಹಿತ ಸಾಧಾರಣ ವರ್ಷಧಾರೆಯಾಯಿತು.

ಬೆಂಗಳೂರು ನಗರ, ಬೆಂ.ದಕ್ಷಿಣ, ಕೋಲಾರದಲ್ಲಿ ಅ.9ರಿಂದ ಅ.10ರವರೆಗೆ ಹಾಗೂ ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ಅ.9ರಂದು ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕೊಡಗು, ಹಾಸನದಲ್ಲಿ ಅ.10ರಿಂದ ಮುಂದಿನ 2 ದಿನ, ಮೈಸೂರಿನಲ್ಲಿ ಅ.10 ಮತ್ತು ದಕ್ಷಿಣ ಕನ್ನಡದಲ್ಲಿ ಅ.11ರಂದು ಜೋರು ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾರಪೂರ್ತಿ ಒಣಹವೆ ಇರಲಿದೆ.

ಕರಾವಳಿ ಭಾಗದಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಸೂಚಿಸಿದೆ. ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 4 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 21 ಡಿ.ಸೆ. ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಮೈಸೂರು ಸೇರಿ ರಾಜ್ಯದ ಹಲವೆಡೆ ಬೆಳಗ್ಗಿನ ಜಾವ ಮಂಜು ಬೀಳುತ್ತಿದೆ. ಬೆಳಗಾವಿ, ಬೀದರ್ ಮತ್ತು ಧಾರವಾಡ ಸೇರಿ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ದೇಶಾದ್ಯಂತ ವಾರದೊಳಗೆ ನೈಋತ್ಯ ಮಾನ್ಸೂನ್ ಹಿಂಪಡೆಯಲಾಗುವುದು.

-ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net