

Mother : ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು(85) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ.
ಯಶೋಧಬಾಯಿ ಮುರುಳೀಧರ್ ಪಾಟೀಲ್ ಮೃತ ಎಂದು ತಿಳಿದುಬಂದಿದೆ. ಅವರ ಮಗ ಅರವಿಂದ್ನೊಂದಿಗೆ ಈಕೆ ವಾಸಿಸುತ್ತಿದ್ದಳು. ಮಂಗಳವಾರ (ಅ.7) ರಾತ್ರಿ ತಾಯಿಯು ಮಲಗಿದ್ದಾಗ ಅರವಿಂದ್ ಆಕೆಯ ಕುತ್ತಿಗೆಯನ್ನು ತನ್ನ ಕೈಗಳಿಂದ ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಆತ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ನನ್ನ ತಾಯಿಯನ್ನು ನಾನೇ ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಮೊದಲಿಗೆ ಅರವಿಂದ್ ಅವರ ಮಾತುಗಳನ್ನು ಪೊಲೀಸರು ನಂಬಲಿಲ್ಲ. ಆದರೆ, ಘಟನೆಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಇಲ್ಲಿ ಯಶೋಧ ಹಾಸಿಗೆಯಲ್ಲಿ ಮೃತಪಟ್ಟಿರುವುದನ್ನು ನೋಡಿದ್ದಾರೆ. ಇದಾದ ನಂತರ ಘಟನೆಯ ಬಗ್ಗೆ ಮಾಹಿತಿಯನ್ನು ತಿಳಿಯಲು ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸರು ಅರವಿಂದ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅರವಿಂದ್ (55) ವಿವಾಹಿತನಾಗಿದ್ದರೂ ಆತ ಮಾನಸಿಕ ಅಸ್ವಸ್ಥನಾಗಿರುವುದರಿಂದ ಆತನನ್ನು ತೊರೆದಿದ್ದಳು. ತಾಯಿಯೊಟ್ಟಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ವರದಿ ಬಂದಿದೆ.(ಏಜೆನ್ಸೀಸ್)