ಕರಾವಳಿಯಲ್ಲಿ 2 ದಿನ ಮಳೆ ಜೋರು: ಉಳಿದೆಡೆ ಇಳಿಮುಖ

rain (5)
Published on

ಬೆಂಗಳೂರು: ಹಲವು ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿದ್ದ ಮಳೆ ಇಳಿಮುಖವಾಗಿದೆ. ಆದರೆ, ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಅ.27ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.

ಇದರ ಪ್ರಭಾವದಿಂದ ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿಯಲ್ಲಿ ಅ.28ರಿಂದ ಮುಂದಿನ 2 ದಿನ ಜೋರು ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿ. ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ, ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬಳಿಕ, ಆ ಭಾಗದಲ್ಲಿ ಅ.30ರಿಂದ ಮಳೆ ಇಳಿಕೆಯಾಗಲಿದೆ.

ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಅ.28ರಂದು ಯೆಲ್ಲೋ ಅಲರ್ಟ್ ಇರಲಿದೆ. ತದನಂತರ, ಆ ಜಿಲ್ಲೆಗಳಲ್ಲಿಯೂ ಮಳೆ ಇಳಿಕೆಯಾಗಲಿದೆ. ಬೆಂಗಳೂರು ನಗರ. ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಳಗಾವಿ, ಬೀದರ್, ವಿಜಯಪುರ, ಯಾದಗಿರಿ, ರಾಯಚೂರು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಈಗಾಗಲೇ ಮಳೆ ಇಳಿಮುಖವಾಗಿದೆ. ಸೈಕ್ಲೋನ್ ಪ್ರಭಾವದಿಂದ ಕರಾವಳಿ ಹೊರತುಪಡಿಸಿ ಮಲೆನಾಡು, ದಕ್ಷಿಣ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಿಗೆ ಅಷ್ಟೇನೂ ಪರಿಣಾಮ ಇರುವುದಿಲ್ಲ. ಘಟ್ಟಪ್ರದೇಶಗಳಲ್ಲಿ ಮಾತ್ರ 2 ದಿನ ಮಳೆ ಇರಲಿದೆ.

| ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net