ಬೆಂಗಳೂರಲ್ಲಿ 2 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್​​​​​​ ಎಚ್ಚರಿಕೆ

rain
Published on

ಬೆಂಗಳೂರು: ವಾರದಿಂದ ಕ್ಷೀಣವಾಗಿದ್ದ ಮುಂಗಾರು ನಗರದಲ್ಲಿ ಬಿರುಸಾಗಿರುವ ಪರಿಣಾಮ ರಾಜಧಾನಿಯ ಹಲವೆಡೆ ಬುಧವಾರ ಧಾರಾಕಾರ ಮಳೆಯಾಯಿತು.

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಸುರಿದರೆ,ಇನ್ನೂ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು. ಇದರಿಂದಾಗಿ ದೈನಂದಿನ ಕಾರ್ಯಗಳಿಗೂ ಅಡ್ಡಿ ಉಂಟಾಯಿತು.ಕೆ.ಆರ್​.ಮಾರುಕಟ್ಟೆ, ಕೆಂಪೇಗೌಡ ಬಸ್​ ನಿಲ್ದಾಣ, ಬಿಟಿಎಂ ಲೇಔಟ್​, ಕೆ.ಆರ್​. ಪುರ, ಮೈಸೂರು ರಸ್ತೆ, ಚಾಮರಾಜಪೇಟೆ, ಬಸವನಗುಡಿ, ಆರ್​.ಟಿ. ನಗರ, ಸಹಕಾರನಗರ, ಜಯನಗರ, ಬಸವನಗುಡಿ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ದಾಸರಹಳ್ಳಿ, ಪೀಣ್ಯ, ನೆಲಮಂಗಲ ರಸ್ತೆ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು.

ನಗರದ ಪ್ರಮುಖ ಜಂಕ್ಷನ್​, ಅಂಡರ್​ಪಾಸ್​ಗಳಲ್ಲಿ ತುಸು ಮಳೆನೀರು ನಿಂತಿತ್ತು. ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾಹನಸವಾರರು ಮಳೆಯಲ್ಲಿಯೇ ನೆನೆದುಕೊಂಡು ತೆರಳುತ್ತಿದ್ದರು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ತುಸು ಸಂಚಾರ ಸಿಕ್ಕು ಉಂಟಾಯಿತು. ವಿಧಾನಸೌಧ ಮುಂಭಾಗದಲ್ಲಿ ಶಾಲಾ ಮಕ್ಕಳು ಮಳೆಯಲ್ಲಿ ಕುಣಿಯುತ್ತಿದ್ದ ದೃಶ್ಯ ಕಂಡುಬಂತು. ಸಂಜೆ ವೇಳೆ ಮನೆಗೆ ತೆರಳುವ ಧಾವಂತದಲ್ಲಿ ಕೆಲವರು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

2 ದಿನ ಯೆಲ್ಲೋ ಅಲರ್ಟ್​​:

ನಗರದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಜೂ.12ರಿಂದ ಮುಂದಿನ 2 ದಿನ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​​​​ ಕೊಟ್ಟಿದೆ. ಜೂ.13ರಿಂದ ಜೂ.14ರವರೆಗೆ ಸಾಧಾರಣ ಮಳೆಯಾದರೆ, ಜೂ.16ರಂದು ಜೋರಾಗಿ ಸುರಿಯಲಿದೆ.ಪ್ರತಿ ಗಂಟೆಗೆ 40- 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 21 ಡಿ.ಸೆ. ಇರಲಿದೆ. ಕೆಲ ಬಡಾವಣೆಗಳಲ್ಲಿ ಮಳೆಗಿಂತ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ. ಒಣಗಿದ ಮರ, ಕೊಂಬೆ ಬೀಳುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ನೀಡಿದೆ.

ಎಲ್ಲೆಲ್ಲಿ ಎಷ್ಟು ಮಳೆ?

ವಿ.ನಾಗೇನಹಳ್ಳಿ, 20, ಹೊರಮಾವು 16 , ಬಸವನಪುರ 14, ಪುಲಿಕೇಶಿನಗರ 13, ಹಗದೂರು 12, ವಿದ್ಯಾರಣ್ಯಪುರ 12, ಎಚ್​ಎಎಲ್​ ವಿಮಾನ ನಿಲ್ದಾಣ 11, ಎಚ್​ಎಸ್​ಆರ್​ ಲೇಔಟ್​ 10 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net