

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮದ ಪಂಜಳ, ಕಜೆಕ್ಕಾರ್, ನೂಜಿ, ನಟ್ಟಿಬೈಲು ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಲ್ಲಿನ ಅಪಾಯಕ್ಕೆ ಸಿಲುಕಿದ ನಿವಾಸಿಗರನ್ನು ಸ್ಥಳಾಂತರಿಸಲಾಗಿದೆ. ಉಪ್ಪಿನಂಗಡಿ ಪೇಟೆಯ ಸ್ಕಂದ ಹೋಟೆಲ್, ಇಂದ್ರಪ್ರಸ್ಥ ವಿದ್ಯಾಲಯದ ಪರಿಸರದಲ್ಲಿ ನೆರೆ ನೀರು ವ್ಯಾಪಿಸಿ ಅಲ್ಲಿನ ಉದ್ಯಮಿಗಳನ್ನು ನಿವಾಸಿಗರನ್ನು ಸಂಕಷ್ಟಕ್ಕೆ ಒಳಪಡಿಸಿತು. ಕೊಪ್ಪಳ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ.
ಮತ್ತೆ 1974ರ ನೆರೆ ಕಾಡಬಹುದೆಂದು ಅಂದಾಜಿಸಿದ್ದ ಇಲ್ಲಿನ ಜನತೆಯನ್ನು ಮಂಗಳವಾರದ ನದಿಯ ಅಪಾಯಕಾರಿಮಟ್ಟದ ಹರಿಯುವಿಕೆ ಮತ್ತೆ ಕಳವಳಕ್ಕೆ ತುತ್ತಾಗಿಸಿದೆ. ಉಭಯ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭಾರಿ ಮಳೆಯಾಗುತ್ತಿರುವುದರಿಂದ ಈ ಬಾರಿಯೂ ಪೇಟೆ ನೆರೆ ಹಾವಳಿಗೆ ತುತ್ತಾಗುವ ಭೀತಿ ಮೂಡಿಸಿದೆ.
ಹಳೆಗೇಟು ಬಳಿಯ ಐತ ಮುಗೇರ ಎಂಬುವರ ಮನೆ ನೇತ್ರಾವತಿ ನದಿ ನೀರಿನಿಂದ ಜಲಾವೃತಗೊಂಡಿದ್ದು, ತೋಡಿನಲ್ಲಿ ನದಿ ನೀರು ಹಾದು ಬಂದಿದ್ದರಿಂದ ಹಳೆಗೇಟು ರಾಷ್ಟ್ರೀಯ ಹೆದ್ದಾರಿಯ ಬದಿಯಿರುವ ಹಡೀಲು ಗದ್ದೆಗಳು ಸಂಪೂರ್ಣ ನೀರಿನಿಂದಾವೃತವಾಗಿ ಸಾಗರದಂತೆ ಕಾಣುತ್ತಿವೆ. ಇನ್ನೊಂದೆಡೆ ಹಳೆಗೇಟಿನಲ್ಲಿ ವಸತಿ ಸಂಕೀರ್ಣ, ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಸುಮಾರು 12 ಮನೆಗಳ ಜನರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಮಠ ಹಿರ್ತಡ್ಕದಲ್ಲಿ ನೇತ್ರಾವತಿ ನದಿ ದಡದಲ್ಲಿರುವ 4-5 ಮನೆಗಳಿಗೆ ನದಿ ನೀರಿನಲ್ಲಿ ಮುಳುಗಡೆಯಾಗುವ ಭೀತಿಯಿದ್ದು, ಇದರಿಂದಾಗಿ ಈ ಮನೆಯವರು ಸರಂಜಾಮುಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ.
ಇಲ್ಲಿನ ಪಂಜಳ ಎಂಬಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು, ಇಲ್ಲಿ ಪೊಲೀಸರು, ಸ್ಥಳೀಯರು ಸ್ಥಳದಲ್ಲಿದ್ದು, ವಾಹನಗಳ ಸಂಚಾರಕ್ಕೆ ಒಂದಷ್ಟು ಅಡಚಣೆಯಾಗಿದೆ.
ಪಂಜಳದ ರಾಷ್ಟ್ರೀಯ ಹೆದ್ದಾರಿ ಬಳಿಯ ಪೆಟ್ರೋಲ್ ಪಂಪ್ವೊಂದರ ಸಮೀಪ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಗುಡ್ಡವನ್ನು ಅಗೆದಿದ್ದು, ಇದು ಮಳೆಗೆ ಇನ್ನಷ್ಟು ಜರಿಯುತ್ತಿದೆ. ಈ ಗುಡ್ಡದ ನಡುವಲ್ಲಿ ಎರಡು ಬೃಹತ್ ಬಂಡೆಕಲ್ಲುಗಳಿದ್ದು, ಅದರಡಿಯ ಮಣ್ಣು ಮಳೆಗೆ ಕರಗುತ್ತಿರುವುದರಿಂದ ಅದು ಕುಸಿದು ಬೀಳುವ ಆತಂಕ ಎದುರಾಗಿದೆ.
ನದಿಗಳ ನೀರು ಏರಿಕೆಯಾಗುತ್ತಲೇ ಇರುವುದರಿಂದ ಹೋಂ ಗಾರ್ಡ್ಗಳನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದು, ಸಂಗಮ ಕ್ಷೇತ್ರದ ಬಳಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.
ಮಂಗಳವಾರ ಬೆಳಗ್ಗಿನಿಂದಲೇ ಪುತ್ತೂರು ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳ ತಂಡ ಜಲಾವೃತ ಪ್ರದೇಶಗಳಿಗೆ ಭೇಟಿ, ನದಿ ಪಾತ್ರದ ಪ್ರದೇಶಗಳ ಪರಿಶೀಲನೆಯಲ್ಲಿದ್ದು, ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಕಾಳಜಿ ಕೇಂದ್ರದ ವ್ಯವಸ್ಥೆಯನ್ನೂ ಈಗಾಗಲೇ ಮಾಡಿದೆ.
ಹೆದ್ದಾರಿಗೆ ನೀರು ನುಗ್ಗಿದಾಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ಜಲಾವೃತಗೊಂಡ ಮನೆಗಳ ಸಾಮಾನು ಸರಂಜಾಮುಗಳ ಸ್ಥಳಾಂತರಕ್ಕೆ ವಿಶ್ವಹಿಂದು ಪರಿಷತ್, ಬಜರಂಗದಳ, ಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್ ವಿಖಾಯ ಸಂಘಟನೆಗಳ ಸದಸ್ಯರು ಸಹಕಾರ ನೀಡುತ್ತಿದ್ದಾರೆ.