ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ

rain
Published on

ರಾಮನಗರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಕೃಷಿ ಸೇರಿ ವಾಣಿಜ್ಯ ವ್ಯಾಪಾರಕ್ಕೂ ಮಳೆ ತೊಡಕುಂಟಾಗುವಂತೆ ಮಾಡಿದೆ.
ಸೋಮವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಒಂದೊಂದು ಭಾರಿ ಜೋರಾದ ಮಳೆಯೂ ಬರುತ್ತಿದೆ. ದಿನನಿತ್ಯ ಕೆಲಸ ಕಾರ್ಯಗಳಿಗೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು, ಪೇಟೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಮಳೆಯಿಂದ ತೊಂದರೆ ಅನುಭವಿಸಿದರು.
ರೈತರು ಜಿಟಿ ಜಿಟಿ ಮಳೆಯಿಂದ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದೆ ಪರಿತಪಿಸಿದರು. ಪೇಟೆ ಬೀದಿಯಲ್ಲಿ ಕೊಡೆ ಹಿಡಿದು ಜನರು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು. ಮಳೆ ಒಂದೇ ಸಮನೆ ಸೋಮವಾರ ರಾತ್ರಿಯಿಂದಲೂ ಜಿನುಗುತ್ತಿರುವ ಕಾರಣ ಬಿಸಿಲಿನ ಚಿತ್ರಣ ಕಾಣದೆ ಇಡೀ ವಾತಾವರಣ ಮಲೆನಾಡನ್ನು ಜ್ಞಾಪಿಸುವಂತೆ ಕಾಣುತ್ತಿದೆ.

ಪರದಾಟ: ಪ್ರತೀ ರಸ್ತೆಗಳಲ್ಲಿ ಗುಂಡಿಗಳು ದರ್ಭಾರ್ ನಡೆಸುತ್ತಿರುವ ಕಾರಣ ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿದ್ದು, ಸವಾರರು ಗುಂಡಿಗಳು ಕಾಣದೆ ಪರದಾಡಿದರು.

ಆಗ್ರಹ: ರಾಮನಗರದ ರಸ್ತೆಗಳು ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿ ಮತ್ತೆ ಆ ಗುಂಡಿಗಳು ಹೆಚ್ಚಾಗಿ ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತವೆ. ಕೂಡಲೇ ನಗರಸಭೆ ರಸ್ತೆ ಗುಂಡಿ ಮುಚ್ಚಿ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ನದಿಯಲ್ಲಿ ನೀರು: ಎರಡು ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದರೂ ಅರ್ಕಾವತಿ ನದಿಯಲ್ಲಿ ನೀರಿನ ಅರಿವಿನ ತೀವ್ರತೆ ಕಂಡುಬಂದಿಲ್ಲ. ಪ್ರತಿದಿನಕ್ಕಿಂತ ಒಂದಷ್ಟು ಹೆಚ್ಚಿನ ಪ್ರಮಾಣದ ನೀರು ಮಾತ್ರ ನದಿಯಲ್ಲಿ ಹರಿಯುತ್ತಿದೆ.

ಹಿಡಿಶಾಪ: ರಾಮನಗರದಲ್ಲಿ ಪ್ರತೀ ರಸ್ತೆಗಳು ಕೆಸರು ಗುಂಡಿಮಯವಾಗಿದ್ದು, ಹೆಜ್ಜೆ ಹೆಜ್ಜೆಗೂ ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯೆಲ್ಲ ಕೆಸರುಮಯವಾಗಿದೆ. ರಸ್ತೆಯಲ್ಲಿ ನಡೆದಾಡುವ ಜನರಂತೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದ ದೃಶ್ಯಗಳು ಕಾಣುತ್ತಿದ್ದವು. ಮಳೆಗೆ ಗಲ್ಲಿ ಗಲ್ಲಿಗಳಲ್ಲಿ ಓಡಾಟ ನಡೆಸದಂತಾಗಿದ್ದು, ಒಂದೆರಡು ದಿನ ಹೀಗೆ ಮಳೆ ಬೀಳುತ್ತಿದ್ದರೆ ರಸ್ತೆ ಚಿತ್ರಣವೇ ಬದಲಾಗುವುದಲ್ಲಿ ಆಶ್ಚರ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net