ದಕ್ಷಿಣ ಕರ್ನಾಟಕ ಭಾಗದಲ್ಲಿ ಮುಂದಿನ ಐದು ದಿನ ಮಳೆ ಅಬ್ಬರ

rain
Published on

ಬೆಂಗಳೂರು:ಅರಬ್ಬಿ ಸಮುದ್ರದಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಭಾನುವಾರ ತಡರಾತ್ರಿ ಬೆಂಗಳೂರು, ಮಂಡ್ಯ, ಶಿವಮೊಗ್ಗದ ಆಗುಂಬೆ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರವಾಗಿ ವರ್ಷಧಾರೆಯಾಗಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಆ.15ರಂದು ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಆರೆಂಜ್​ ಅರ್ಲಟ್​ ನೀಡಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಆ.13, ಆ.14ರಂದು ಯೆಲ್ಲೋ ಅರ್ಲಟ್​ ಇರಲಿದೆ.

ರಾಮನಗರ, ಚಾಮರಾಜನಗರದಲ್ಲಿ ಆ.13ರಿಂದ ಆ.17ರವರೆಗೆ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ತುಮಕೂರಿನಲ್ಲಿ ಆ.15ರಿಂದ ಮುಂದಿನ ಮೂರು ದಿನ ಯೆಲ್ಲೋ ಅರ್ಲಟ್​ ನೀಡಲಾಗಿದೆ. ದಕ್ಷಿಣ ಕರ್ನಾಟಕ ಇತರ ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಕರಾವಳಿ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕ್ಷೀಣವಾಗಿದೆ.

ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ಮಾತನಾಡಿ, ಉತ್ತರ ಭಾರತದಲ್ಲಿ ಮುಂಗಾರು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಮಳೆ ಇಳಿಮುಖವಾಗಿದೆ. ಅರಬ್ಬಿ ಸಮುದ್ರದಲ್ಲಿ ತೇವಾಂಶ ಭರಿತ ಮೋಡ ಇರವ ಹಿನ್ನೆಲೆಯಲ್ಲಿ ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮಳೆ ಜೋರು ಇರಲಿದೆ. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕಡಿಮೆ ವರ್ಷಧಾರೆಯಾಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net