ಶಿರಸಿ, ಸಿದ್ದಾಪುರ ತಾಲೂಕುಗಳಲ್ಲಿ ಭಾರಿ ಮಳೆ

9mnd3-
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿವೇರಿ ಪಕ್ಷಿಧಾಮದ ಬಳಿಯ ಜಲಾಶಯ ಭರ್ತಿಯಾಗಿದ್ದು, ಮಂಗಳವಾರ ಕೋಡಿ ಹರಿಯುತ್ತಿದೆ.
Published on




ಕಾರವಾರ: ಜಿಲ್ಲೆಯ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಕುಮಟಾ ಅಘನಾಶಿನಿ ದಂಡೆಗಳಲ್ಲಿ ಪ್ರವಾಹದ ಭೀತಿ ಆವರಿಸಿದೆ. ಕರಾವಳಿಯ ಐದು ಹಾಗೂ ಇತರ ಮಲೆನಾಡಿನ ತಾಲೂಕುಗಳಲ್ಲಿ ಹದವಾಗಿ ಮಳೆಯಾಗುತ್ತಿದೆ.
ಮಂಗಳವಾರ ಬೆಳಗಿನ ವರದಿಯಂತೆ ಅಂಕೋಲಾ-35.7, ಭಟ್ಕಳ-68.5, ಹಳಿಯಾಳ- 23.9, ಹೊನ್ನಾವರ-73.8, ಕಾರವಾರ-48.1, ಕುಮಟಾ-56, ಮುಂಡಗೋಡ-35.9, ಸಿದ್ದಾಪುರ- 102.5, ಶಿರಸಿ-86.5, ಜೊಯಿಡಾ-68.8, ಯಲ್ಲಾಪುರ-49.4, ದಾಂಡೇಲಿ-31.9 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ 26 ಮನೆಗಳಿಗೆ ಹಾನಿಯಾಗಿದೆ. 10 ಮನೆಗಳಿಗೆ ಭಾಗಶಃ ಹಾಗೂ 16 ಮನೆಗಳಿಗೆ ಅಲ್ಪ ಹಾನಿಯಾಗಿದೆ. ಮುಖ್ಯವಾಗಿ ಮುಂಡಗೋಡಿನ 11 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ವರದಿ ಹೇಳಿದೆ.
ಮಳೆ ಕಡಿಮೆ: ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್ 13 ರವರೆಗೂ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಗರಿಷ್ಠ 115 ಮಿಮೀ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಮೀನುಗಾರಿಕೆ ಸ್ಥಗಿತ
ಕಳೆದ ಮೂರು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದೆ. ಇದರಿಂದ ಪ್ರಾರಂಭವಾದ ಮೊದಲ ವಾರದಲ್ಲೇ ಆಳ ಸಮುದ್ರ ಮೀನುಗಾರಿಕೆ ಸ್ಥಗಿತವಾಗಿದೆ. ಬೋಟ್​ಗಳು ಲಂಗರು ಹಾಕಿವೆ. ಆಗಸ್ಟ್ ರಿಂದ ಆಳ ಸಮುದ್ರ ಮೀನುಗಾರಿಕೆ ಪ್ರಾರಂಭವಾಗಿತ್ತು. ಮೊದಲ ಒಂದು ವಾರ ಸಾಕಷ್ಟು ಶಿಗಡಿ ಮೀನು ಬೇಟೆಯ ನಿರೀಕ್ಷೆಯಲ್ಲಿ ಮೀನುಗಾರರಿದ್ದರು. ಆದರೆ, ಶಿಗಡಿ ಬೇಟೆಯೂ ಇಳಿಮುಖವಾಗಿದೆ. ಇತ್ತ ತೂಫಾನ್​ನಿಂದ ದೋಣಿಗಳು ನಿಂತಿದ್ದರಿಂದ ಮೀನುಗಾರರು ನಿರಾಶರಾಗಿದ್ದಾರೆ. ಇತ್ತ ಮಾರುಕಟ್ಟೆಯಲ್ಲಿ ಮೀನಿನ ಬೆಲೆ ಹೆಚ್ಚಿದೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net