

ಬೆಂಗಳೂರು: ಮುಂಗಾರು ಚುರುಕುಗೊಂಡಿರುವ ಬೆನ್ನಲ್ಲೇ ರಾಜಧಾನಿಯ ಹಲವೆಡೆ ಶುಕ್ರವಾರ ಭರ್ಜರಿ ವರ್ಷಧಾರೆಯಾಗಿದೆ. ರಾಜರಾಜೇಶ್ವರಿನಗರ, ಯಲಹಂಕ, ಪಶ್ಚಿಮ ವಲಯ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಸಾಗಿ ಮಳೆ ಬಿದ್ದಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಮಧ್ಯಾಹ್ನ 2.30ಕ್ಕೆ ಶುರುವಾದ ಮಳೆ ಅರ್ಧ ಗಂಟೆ ಕಾಲ ನಾಗಬಾವಿ, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ಚಾಮರಾಜಪೇಟೆ, ಇಟ್ಟಮಡು, ಮೆಜೆಸ್ಟಿಕ್ ಹಾಗೂ ಕೆ.ಆರ್. ಮಾರುಕಟ್ಟೆ ಸೇರಿ ನಗರದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿತು. ಕೆಲ ರಸ್ತೆಗಳ ಮೇಲೆ ನೀರು ನುಗ್ಗಿದ ಪರಿಣಾಮ ವಾಹನಸವಾರರು ಪರದಾಡಿದರು. ಮಳೆಯಿಂದಾಗಿ ಮೇಲ್ಸೇತುವೆ ಸೇರಿ ಇತರ ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಮ್ಯಾನ್ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆಯ ಮೇಲೆ ಕೊಳಚೆ ನೀರು ಹರಿಯಿತು. ನಾಯಂಡಹಳ್ಳಿಯಲ್ಲಿ 15 ಮಿಲಿಮೀಟರ್, ರಾಜರಾಜೇಶ್ವರಿನಗರ 14, ಜ್ಞಾನಭಾರತಿ 13, ಯಲಹಂಕ, ಜಿಕೆವಿಕೆ 13, ವಿದ್ಯಾರಣ್ಯಪುರ 12, ಕೆಂಗೇರಿ 11, ಜಕ್ಕೂರು 11, ಹೆಮ್ಮಿಗೇಪುರದಲ್ಲಿ 11 ಮಿಮೀ ಮಳೆಯಾಗಿದೆ.
5 ದಿನ ಮಳೆ: ನಗರದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಕೆಲವೆಡೆ ಬಿರುಸಾಗಿ ಸುರಿದರೆ ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಗಾಳಿಸಹಿತ ಮಳೆಯಾಗಲಿದೆ. ಮುಂದಿನ ಎರಡು ದಿನ ಮೋಡ ಕವಿಡ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿ.ಸೆ ಮತ್ತು 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಿಬಿಎಂಪಿಗೆ ಕರೆಗಳ ಫಜೀತಿ: ಕಳೆದ ಎರಡು ವಾರದಿಂದ ಮರ ಬಿದ್ದಿರುವ ಕುರಿತು ದೂರುಗಳ ದಾಖಲಾಗದೆ ನಿರುಮ್ಮಳವಾಗಿದ್ದ ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿಗೆ ಇದೀಗ ಮತ್ತೆ ಕರೆಗಳು ಬರುತ್ತಿವೆ. ಕೆಲವಡೆ ಒಣಗಿದ, ಬೀಳುವ ಹಂತದಲ್ಲಿರುವ ಮರ ಧರಾಶಾಯಿಯಾಗುತ್ತಿರುವ ಬಗ್ಗೆ ದೂರು ದಾಖಲಾಗಿವೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿ ವಾಹನ ನಿಲ್ಲಿಸಿದ್ದ ವಾಹನಗಳು ಮರ ಬಿದ್ದ ರಭಸಕ್ಕೆ ಜಖಂ ಆಗುತ್ತಿವೆ.