ಅರ್ಧರಾಜ್ಯದಲ್ಲಿ ಮಹಾಮಳೆ ರುದ್ರನರ್ತನ: ವರುಣನ ನಿರಂತರ ಆರ್ಭಟಕ್ಕೆ ತತ್ತರಿಸಿದ ಜನ..

State
ಧಾರಾಕಾರ ಮಳೆಯಿಂದ ಬೆಂಗಳೂರಿನ ಸರ್ಜಾಪುರ ಸಮೀಪದ ಬಡಾವಣೆಯೊಂದು ಜಲಾವೃತಗೊಂಡಿರುವುದು.
Published on

ಬೆಂಗಳೂರು: ಕಂಡು ಕೇಳರಿಯದ ರೀತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ರಾಜ್ಯದ ಜನತೆಯನ್ನು ಕಂಗೆಡಿಸಿದ್ದು, ವರುಣನ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಮಳೆ ಸಂಬಂಧಿತ ಅವಘಡಗಳಿಗೆ ನಾಲ್ವರು ಬಲಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಸಮೀಪದ ಮಲ್ಲೂರಹಟ್ಟಿಯಲ್ಲಿ ಸೋಮವಾರ ಸಿಡಿಲು ಬಡಿದು ಕುರಿಗಾಹಿ ಮಹಾಂತೇಶ್ (55) ಮೃತಪಟ್ಟಿದ್ದಾನೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ಲೇ.ಕೆಂಪಯ್ಯ ಅವರ ಮಗ ಕುಳ್ಳಯ್ಯ (40) ಸೋಮವಾರ ಮೃತಪಟ್ಟಿದ್ದಾರೆ. ಚಾಮರಾಜನಗರದ ದಡಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಲಗಿದ್ದ ಮೂರ್ತಿ (40) ಮೇಲೆ ಗೋಡೆ ಬಿದ್ದು ಸ್ಥಳಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಕಾಟಾಪುರದದಲ್ಲಿ ಸಿಡಿಲಿಗೆ ಸಣ್ಣನೀಲಪ್ಪ (64) ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ 3 ನದಿಗಳು ಹಾದು ಹೋಗುವ 40ಕ್ಕೂ ಅಧಿಕ ಸೇತುವೆ ಮುಳುಗಡೆಯಾಗಿವೆ. ನೀರಿನ ಅರಿವು ಗೊತ್ತಿದ್ದರೂ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಮಲಪನಹಳ್ಳಿ ಸೇತುವೆ ಮೇಲೆ ಬೊಲೆರೊ ಚಲಾಯಿಸಿದ ಚಾಲಕ ವಾಹನ ಸಮೇತ ಕೊಚ್ಚಿ ಹೋಗಿದ್ದಾನೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಗ್ರಾಮದಲ್ಲಿ ಮಹದೇವಶೆಟ್ಟಿ ಎಂಬುವರ ಮನೆಗೆ ಭಾನುವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಮೊದಲ ಮಹಡಿಯ ಮಂಚದ ಮೇಲೆ ಮಲಗಿದ್ದ ಮಣಿಕಂಠ (25), ಕೌಕ್ (13), ಚೇತನ (19), ಮಹದೇವಮ್ಮ (45) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರ್ಕಾವತಿ ನೀರಿನ ಮಟ್ಟ ಹೆಚ್ಚಳ: ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲಿ ಅರ್ಕಾವತಿ ನದಿಗೆ ನೀರು ಬಿಟ್ಟಿರುವ ಕಾರಣ ನದಿಗೆ ಹೊಂದಿಕೊಂಡಿರುವ ರಾಮನಗರದ ಬಾಲಗೇರಿ, ನಾಲಬಂದವಾಡಿ, ಪೂಲ್ ಬಾಗ್ ಪ್ರದೇಶಗಳಲ್ಲಿರುವ ಜನರನ್ನು ನಗರಸಭೆ ಸಿಬ್ಬಂದಿ ಸೋಮವಾರ ಸಂಜೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ಖಾಸಗಿ ಬಸ್ ರಕ್ಷಣೆ: ತೋವಿನಕೆರೆ ಗ್ರಾಪಂ ದಾಸಾಲುಕುಂಟೆ ಕೋಡಿ ನೀರಿನಲ್ಲಿ ಸಿಲುಕಿದ್ದ ಖಾಸಗಿ ಬಸ್ ಹಾಗೂ ಪ್ರಯಾಣಿಕರನ್ನು ಜೆಸಿಬಿ ಮತ್ತು ಟ್ರಾ್ಯಕ್ಟರ್ ಸಹಾಯದಿಂದ ರಕ್ಷಣೆ ಮಾಡಿ ಬಸ್ ಮೇಲಕ್ಕೆಳೆಯಲಾಗಿದೆ.

ಹೊಳೆಯಾಗಿ ಮಾರ್ಪಾಡಾದ ಹೆದ್ದಾರಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೊಳುಬೈಲು ಎಂಬಲ್ಲಿ ಭಾರಿ ಮಳೆಗೆ ಸೋಮವಾರ ಸಂಜೆ ರಸ್ತೆ ಪೂರ್ತಿ ನೀರು ತುಂಬಿದ್ದು ರಾಷ್ಟ್ರೀಯ ಹೆದ್ದಾರಿ ಹೊಳೆಯಾಗಿ ಮಾರ್ಪಾಡಾಗಿತ್ತು. ಇದರಿಂದ ವಾಹನ ಸಂಚಾರವೂ ಕೆಲ ಕಾಲ ಸ್ಥಗಿತಗೊಂಡಿತ್ತು. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ವಿವಿಧ ಕಡೆಗಳಿಂದ ಹರಿದು ಬಂದ ನೀರು ರಸ್ತೆಯಲ್ಲೇ ಸಂಗ್ರಹಗೊಂಡು ಹೊಳೆಯಂತೆ ಹರಿಯಲು ಕಾರಣವಾಯಿತು ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಟಪನಹಳ್ಳಿ ಹಾಗು ಚಿಕೇನಕೊಪ್ಪ ಗ್ರಾಮದ ಮದ್ಯದಲ್ಲಿ ಹಳ್ಳ ತುಂಬಿ ಬಂದಿದ್ದರಿಂದ ಕೃಷಿ ಕೆಲಸಕ್ಕೆ ಹೋಗಿದ್ದ ಗ್ರಾಮಸ್ಥರು ಮನೆಗಳಿಗೆ ತೆರಳಲು ಪರದಾಡಿದರು.

78 ಮನೆಗಳು ಸಂಪೂರ್ಣ ಜಲಾವೃತ: ಮೈಸೂರು ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾನುವಾರ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಹಾನಿಯುಂಟು ಮಾಡಿದೆ. ಭಾರಿ ಮಳೆಗೆ ನಂಜನಗೂಡು ತಾಲೂಕಿನ ಹಳೇಪುರಕೆರೆ ಕೋಡಿ ಬಿದ್ದು ಹೆಡತಲೆ ಗ್ರಾಮದ 78 ಮನೆಗಳು ರಾತ್ರೋರಾತ್ರಿ ಸಂಪೂರ್ಣ ಜಲಾವೃತಗೊಂಡಿವೆ. ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾಡಳಿತದ ತಂಡ ತುರ್ತು ನೆರವು ನೀಡಿದೆ. ಮಳೆ ನೀರು ಹರಿದುಬರುವುದು ತಿಳಿಯುತ್ತಿದ್ದಂತೆ 400ಕ್ಕೂ ಹೆಚ್ಚು ನಿವಾಸಿಗಳು ಮನೆಯಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

ಮಳೆಗೆ 45 ಆಡುಗಳು, 1 ಕರು ಬಲಿ: ಮಂಡ್ಯ ಜಿಲ್ಲೆಯಲ್ಲಿ ವರುಣನ ಮತ್ತೆ ಅಬ್ಬರಿಸಿದ್ದು, ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮಳವಳ್ಳಿ ತಾಲೂಕಿನಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹೊನಗನಹಳ್ಳಿ ಕೆರೆ ತುಂಬಿ ಕೋಡಿ ಒಡೆದ ಪರಿಣಾಮ ಭೀಮಾ ನದಿ ಬರೋಬ್ಬರಿ 25 ವರ್ಷಗಳ ನಂತರ ಉಕ್ಕಿ ಹರಿದಿದೆ. ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಜಮೀಲ್ ಪಾಷಾ ಎಂಬುವರ ಆಡು ಸಾಕುವ ಶೆಡ್ಡಿಗೆ ನೀರು ನುಗ್ಗಿದ ಪರಿಣಾಮ 45 ಆಡುಗಳು ಮತ್ತು ಒಂದು ಹಸುವಿನ ಕರು ಮೃತಪಟ್ಟಿದೆ.

ಕ್ರಮ ವಹಿಸಲು ಸರ್ಕಾರದಿಂದ ಸುತ್ತೋಲೆ: ಮಳೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಾನಾ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಎಲ್ಲಾ ರೀತಿಯ ಮುಂಜಾಗ್ರತಾ ಹಾಗೂ ರೋಗ ನಿಯಂತ್ರಣಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸರ್ಕಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಎಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ

  • ಸಮರ್ಪಕ ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆ.
  • ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಸೂಚಿಸುವುದು.
  • ಅಗತ್ಯ ಇರುವೆಡೆ ತುರ್ತು ಸಂದರ್ಭ ಆಧರಿಸಿ ರಾಸಾಯ ನಿಕ ಬಳಸಿ ಧೂಮೀಕರಣ ಮಾಡುವುದು.
  • ರೋಗಗಳ ತಡೆಯುವಿಕೆ ಹಾಗೂ ಎಚ್ಚರಿಕೆ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು.
  • ರೋಗಗಳ ಪತ್ತೆ ಕಾರ್ಯ ಹಾಗೂ ಚಿಕಿತ್ಸೆಗೆ ಕ್ರಮ ವಹಿಸಲು ಸೂಚನೆ.

ಮಲೆನಾಡಿನಲ್ಲಿ ಮಳೆ, ಅಡಕೆಗೆ ಕೊಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಮನೆ ಕುಸಿದಿವೆ. ಬಾಳೆಹೊನ್ನೂರಿನಲ್ಲಿ ಕೆರೆ ಕೋಡಿ ಒಡೆದು ಜಮೀನು ಜಲಾವೃತವಾಗಿದೆ. ಚಿಕ್ಕಮಗಳೂರಿನ ಕಳಸಾಪುರ ಕೆರೆ ಕೋಡಿ ಒಡೆದು ಜಮೀನಿಗೆ ನೀರು ನುಗ್ಗಿದೆ. ಮಲೆನಾಡಿನಲ್ಲಿ ಅಡಕೆಗೆ ಕೊಳೆ ರೋಗ ಬಾಧಿಸಿದೆ. ಹೊಸನಗರ, ಸಾಗರ, ತೀರ್ಥಹಳ್ಳಿಯ ಬಹುತೇಕ ಕಡೆ ಕೊಳೆ ರೋಗದಿಂದ ಅಡಕೆ ಉದುರುತ್ತಿದೆ. ಎನ್​ಡಿಆರ್​ಎಫ್​ನಿಂದ ಪ್ರತಿ ಹೆಕ್ಟೇರ್​ಗೆ 28 ಸಾವಿರ ರೂ. ಬೆಳೆ ನಷ್ಟ ಪರಿಹಾರ ನೀಡಲು ಅವಕಾಶವಿದೆ. ಈ ಮೊತ್ತವನ್ನು ದ್ವಿಗುಣಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮತ್ತೆ ಚಾಮರಾಜನಗರ ಮುಳುಗಡೆ: ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ವರುರ್ಣಾಭಟ ಮುಂದುವರಿದಿದ್ದು, ಚಾಮರಾಜನಗರ ಈಗ ಅಕ್ಷರಶಃ ಪ್ರವಾಹ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ. ತಾಲೂಕಿನ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ನೀರನ್ನು ಹೊರಬಿಡಲಾಗಿದ್ದು, ನದಿ ಪಾತ್ರದ ಹಳ್ಳಿಗಳು ಮತ್ತೆ ಜಲಾವೃತಗೊಂಡಿವೆ. ಜ್ಯೋತಿಗೌಡನಪುರ, ಯಳಂದೂರಿನ ಅಗರ-ಮಾಂಬಳ್ಳಿ, ಯರಿಯೂರು, ಅಂಬಳೆ, ಕಂದಹಳ್ಳಿ ಸೇರಿದಂತೆ ಇತರ ಕಡೆಗಳಲ್ಲಿ ನೀರು ನುಗ್ಗಿದೆ. ಸೇತುವೆಗಳು ಮುಳುಗಡೆಯಾಗಿವೆ. ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲೂಕುಗಳಲ್ಲೂ ಜಲಸಂಕಷ್ಟ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳೊಂದಿಗೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹದಿಂದಾಗಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟ ಉಂಟಾಗಿದ್ದರೆ, ಮನೆಗಳಿಗೂ ಹಾನಿಯಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ 1731 ಹೆಕ್ಟೇರ್ ಕೃಷಿ ಮತ್ತು 350 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ.

ಹಾಸನದಲ್ಲಿ ಮತ್ತೆ ಮಳೆ ಅಬ್ಬರ: ಹಾಸನ ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಮತ್ತೆ ಮಳೆ ಅಬ್ಬರ ಶುರುವಾಗಿದೆ. ಭಾನುವಾರ ರಾತ್ರಿ ಇಡೀ ಸುರಿದ ಮಳೆಯಿಂದ ಹಲವು ಕೆರೆಗಳು ಎರಡನೇ ಬಾರಿಗೆ ಕೋಡಿ ಬಿದ್ದಿವೆ. ಹಾಸನ ತಾಲೂಕು ನಿಡೂಡಿ ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಅರಸೀಕೆರೆ ತಾಲೂಕಿನ ಕಂತೇನಹಳ್ಳಿ ದೊಡ್ಡಕೆರೆ ಹನ್ನೊಂದು ವರ್ಷಗಳ ನಂತರ ಭರ್ತಿಯಾಗಿ ಕೋಡಿ ಬಿದ್ದಿದೆ. ಹಾಸನ ನಗರದ ಪೊಲೀಸ್ ಬಡಾವಣೆ ಸೇರಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳಲ್ಲಿದ್ದ ವಸ್ತುಗಳಿಗೆ ಹಾನಿಯಾಗಿವೆ. ಅರಸೀಕೆರೆ, ಬೇಲೂರು ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಭಾರಿ ಮಳೆಯಿಂದಾಗಿ ಕೆರೆಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ನಾಳೆಯಿಂದ ಕೇಂದ್ರ ತಂಡ ಅಧ್ಯಯನ

ರಾಜ್ಯದಲ್ಲಿ ಭೀಕರವಾಗಿ ಸುರಿದಿರುವ ಮಳೆಯಿಂದ ಆಗಿರುವ ಹಾನಿ ಕುರಿತು ಕೇಂದ್ರ ತಂಡ ಸೆ.7ರಿಂದ ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಸೋಮವಾರ ಸುದ್ದಿಗಾರರಿಗೆ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿ, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಶಿಶ್​ಕುಮಾರ್ ನೇತೃತ್ವದಲ್ಲಿ ಏಳು ಅಧಿಕಾರಿಗಳ ತಂಡ ಆಗಮಿಸುತ್ತಿದೆ. ಸೆ.7ಕ್ಕೆ ಬೆಂಗಳೂರಿಗೆ ಆಗಮಿಸುವ ತಂಡ ಅಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಅವರೊಂದಿಗೆ ಕುಮಾರಕೃಪ ಅತಿಥಿಗೃಹದಲ್ಲಿ ಸಭೆ ನಡೆಸಲಿದೆ. ನಂತರ ಜಿಲ್ಲೆಗಳಿಗೆ ತೆರಳುತ್ತದೆ. ಸೆ.9ರಂದು ವಾಪಸ್ ತೆರಳಲಿದೆ ಎಂದರು.

ತಂಡದ ಮುಖ್ಯಸ್ಥ ಆಶಿಶ್​ಕುಮಾರ್ ನೇತೃತ್ವದ ತಂಡ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಜಲಶಕ್ತಿ ಸಚಿವಾಲಯದ ಅಧಿಕಾರಿ ಅಶೋಕ್​ಕುಮಾರ್ ನೇತೃತ್ವದ ತಂಡ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಕೃಷಿ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ತಂಡ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಂಚರಿಸಿ ಪರಿಸ್ಥಿತಿಯ ಅಧ್ಯಯನ ಮಾಡಲಿದೆ. ಪ್ರಕೃತಿ ವಿಕೋಪ ಉಸ್ತುವಾರಿ ಕೋಶದ ಆಯುಕ್ತ ಡಾ.ಮನೋಜ್​ರಾಜ್, ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಹಾಗೂ ವೈಜ್ಞಾನಿಕ ಅಧಿಕಾರಿ ಎಸ್.ಜಗದೀಶ್ ಮೂರು ತಂಡಗಳಿಗೆ ತಲಾ ಒಬ್ಬರಂತೆ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ.

ಇದುವರೆಗೆ ಸಂಭವಿಸಿದ ಮಳೆ ಹಾನಿಗೆ ಪರಿಹಾರ ಕೋರಿ ಈಗಾಗಲೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಅದರೆ ಮಳೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಸಂಭವಿಸುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಶೋಕ್ ವಿವರಿಸಿದರು. ಪ್ರವಾಹಪೀಡಿತ ಪರಿಸ್ಥಿತಿ ಎದುರಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ನಿಧಿಗೆ ಮತ್ತೊಂದು ಕಂತಿನ ಹಣ ಬಿಡುಗಡೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ನಿಧಿಯಲ್ಲಿ ಕನಿಷ್ಟ 5 ಕೋಟಿ ರೂ. ಇರುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net