

ಬೆಂಗಳೂರು: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇಂದು ಮುಂಜಾನೆ ಆರಂಭವಾದ ಮಳೆ ಎಡಬಿಡದೆ ಸುರಿಯುತ್ತಿದ್ದು, ಜನಜೀವ ಅಸ್ತವ್ಯಸ್ತಗೊಂಡಿದೆ.
ಮಲ್ಲೇಶ್ವರ, ಯಶವಂತಪುರ, ವೈಯಾಲಿಕಾವಲ್, ಶ್ರೀರಾಂಪುರ. ಜಯನಗರ, ಚಾಮರಾಜಪೇಟೆ, ಶಾಂತಿನಗರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಬಸವನಗುಡಿ, ಕೆಂಗೇರಿ, ಮೈಸೂರು ರಸ್ತೆ, ರಾಜಾಜಿನಗರ, ರಾಜರಾಜೇಶ್ವರಿನಗರ, ಜಾಲಹಳ್ಳಿ ಕ್ರಾಸ್, ವಿಜಯನಗರ, ಮಾರುತಿ ಮಂದಿರ, ಗಾಳಿ ಆಂಜನೇಯ ದೇವಸ್ಥಾನ ಮತ್ತಿತರರ ಬಡಾವಣೆಗಳಲ್ಲಿ ಧಾರಾಕಾರ ಮಳೆಯಾಗಿದೆ. ನಗರದ ಹಲವು ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿದಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ನಗರದ ಜನತೆ ಮನೆಬಿಟ್ಟು ಆಚೆಗೆ ಬರಲಿಲ್ಲ. ಜತೆಗೆ ಮಲೆನಾಡು ವಾತಾವರಣ ಸೃಷ್ಟಿಯಾಗಿದೆ. ಡಿಜಿ ಹಳ್ಳಿ ವ್ಯಾಪಿಯ ಅಂಬೇಡ್ಕರ್ ನಗರದ 2ನೇ ಹಂತದಲ್ಲಿ ಮರ ಬಿದ್ದಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ವಿಜಯವಾಣಿಗೆ ತಿಳಿಸಿದ್ದಾರೆ.
ಸಿಎಂ ಕರೆ: ನಗರದಲ್ಲಿ ಮಳೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಗೆ ಕರೆ ಮಾಡಿ ಮುನ್ನಚ್ಚರಿಕೆ ಕೈಗೊಳ್ಳುವಂತೆ, ರಾಜಕಾಲುವೆ ತಗ್ಗು ಪ್ರದೇಶಗಳಲ್ಲಿ ಗಮನ ಹರಿಸುವಂತೆ ಹಾಗೂ ಯಾವುದೇ ಕ್ಷಣದಲ್ಲಿ ಎಲ್ಲ ಅಧಿಕಾರಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸಾಧಾರಣ ಮಳೆ ಸಾಧ್ಯತೆ: ಮುಂದಿನ 3 ದಿನ ನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಅಗಾಗ್ಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈವರೆಗೆ ಯಾವುದೇ ಅಲರ್ಟ್ ಘೋಷಣೆ ಮಾಡಿಲ್ಲ.