ಭಾರಿ ಮಳೆ ಕಾರವಾರ ಚೆಂಡಿಯಾದಲ್ಲಿ ಕೃತಕ ನೆರೆ

Heavy-Rain-Flood-in-chendiya
Published on

ಕಾರವಾರ: ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಕರಾವಳಿಯ ವಿವಿಧೆಡೆ ಮತ್ತೆ ಕೃತಕ ನೆರೆ ಉಂಟಾಗಿದೆ.
ಬುಧವಾರ ಬೆಳಗಿನ ವರದಿಯಂತೆ ಕಾರವಾರದಲ್ಲಿ 158.3 ಮಿಮೀ ಮಳೆಯಾಗಿದೆ. ಇದರಿಂದ ಚೆಂಡಿಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಡೂರಿನಲ್ಲಿ ನೀರು ಗದ್ದೆ, ರಸ್ತೆ, ಮನೆಯಂಗಳದಲ್ಲಿ ತುಂಬಿದ್ದು, ವಾಹನ ಸಂಚಾರಕ್ಕೆ ಕಷ್ಟವಾಗಿದೆ.

ಮಳೆ ಸ್ಪಲ್ಪ ಹೆಚ್ಚಾದರೂ ಮನೆಗಳಿಗೆ ನುಗ್ಗುವ ಆತಂಕದಲ್ಲಿ ಜನರಿದ್ದಾರೆ. ಗ್ರಾಮದಲ್ಲಿ ಐದು ಮನೆಗಳಿದ್ದು, ಸುಮಾರು 19 ಜನರಿದ್ದಾರೆ. ಈಗ ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿದೆ. ಯಾವುದೇ ಕ್ಷಣದಲ್ಲೂ ಮನೆಗಳಿಗೆ ನೀರು ನುಗ್ಗುವ ಭಯದಲ್ಲಿ ಗ್ರಾಮಸ್ಥರು ಮನೆಗಳನ್ನು ಬಿಡಲು ಸಿದ್ಧತೆ ನಡೆಸುತ್ತಿದ್ದಾರೆ.

ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿ ನಡೆದಿದ್ದು, ಅದಕ್ಕಾಗಿ ಈಡೂರಿನಿಂದ ಸಮುದ್ರ ಕಡೆಗೆ ನೀರು ಹರಿಯುವ ನಾಲೆಗಳನ್ನು ಮುಚ್ಚಲಾಗಿದೆ. ಹಾಗಾಗಿ ಗ್ರಾಮದಲ್ಲಿ ನೀರು ನಿಂತುಕೊಂಡಿದೆ ಎಂಬುದು ಗ್ರಾಮಸ್ಥರ ದೂರು.

ಗ್ರಾಪಂ ಪಿಡಿಒ ನಾಗೇಶ್ವರ ತೆಂಡುಲ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರೆ ಸಂಭವಿಸಿದಲ್ಲಿ ಅರಗಾ ಹಾಗೂ ಚೆಂಡಿಯಾ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು `ವಿಜಯವಾಣಿ'ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಗೃಹಲಕ್ಷ್ಮಿ ವಿಳಂಬ?; ಅದೊಂದೇ ಕಾರಣಕ್ಕೆ ಸ್ವಲ್ಪ ತಡವಾಗುತ್ತಿದೆ ಎಂದ ಹೆಬ್ಬಾಳ್ಕರ್​!
ಕಾರವಾರವಲ್ಲದೆ, ಭಟ್ಕಳ, ಕುಮಟಾ ಹೊನ್ನಾವರ, ಭಾರೀ ಮಳೆಯಾಗಿದೆ. ಎಲ್ಲ ತಾಲೂಕುಗಳಲ್ಲಿಯೂ ವಿವಿಧ ಸಮಸ್ಯೆಗಳು ಉಂಟಾಗಿವೆ. ಅಂಕೋಲಾದಲ್ಲಿ 67.5, ಭಟ್ಕಳದಲ್ಲಿ 104.4, ದಾಂಡೇಲಿಯಲ್ಲಿ 5, ಹಳಿಯಾಳ 1.2, ಹೊನ್ನಾವರ 90.6, ಜೊಯಿಡಾ-11.6, ಕುಮಟಾ-86.8, ಮುಂಡಗೋಡ-0.2, ಸಿದ್ದಾಪುರ-28.2, ಶಿರಸಿ-7, ಯಲ್ಲಾಪುರ-19.2 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net