ನಾಳೆಯಿಂದ ರಾಜ್ಯದ ಹಲವೆಡೆ ಮಳೆ ಬಿರುಸು: 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

rain
Published on

ಬೆಂಗಳೂರು: ತೇವಾಂಶ ಭರಿತ ಮೋಡ ಸೇರಿ ಹವಾಮಾನದಲ್ಲಾದ ತಕ್ಷಣ ಬದಲಾವಣೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆ.4ರಿಂದ ಆ.10 ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಉಡುಪಿಯ ಕೋಟ, ಉತ್ತರ ಕನ್ನಡದ ಮಂಕಿ, ಗೇರುಸೊಪ್ಪ, ಶಿರಾಲಿ, ಉಡುಪಿಯ ಕುಂದಾಪುರ, ದಕ್ಷಿಣ ಕನ್ನಡದ ಧರ್ಮಸ್ಥಳ, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಮಂಡ್ಯ ಕೃಷ್ಣರಾಜಪೇಟೆ ಮತ್ತು ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾನುವಾರ ಜೋರಾಗಿ ಮಳೆಯಾಗಿತ್ತು.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು,ಕೊಡಗು,ಶಿವಮೊಗ್ಗ,ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂ.ಗ್ರಾಮಾಂತರದಲ್ಲಿ ಮುಂದಿನ 2 ದಿನ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಇಲಾಖೆ, ಯೆಲ್ಲೋ ಅಲರ್ಟ್ ಕೊಟ್ಟಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಚಿತ್ರದುರ್ಗ, ರಾಮನಗರದಲ್ಲಿ ಆ.5ರಿಂದ ಮುಂದಿನ 2 ದಿನ, ಮಂಡ್ಯ ಮತ್ತು ಮೈಸೂರಿನಲ್ಲಿ ಆ.6 ರಂದು ಯೆಲ್ಲೋ ಅಲರ್ಟ್ ಇರಲಿದೆ . ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಆ.7ರಂದು, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಆ.8ರಂದು ಯೆಲ್ಲೋ ಅಲರ್ಟ್ ಇರಲಿದೆ. ಉಳಿದೆಡೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net