ಬೈಂದೂರು ತಾಲೂಕಲ್ಲಿ ಮಳೆ ಅಬ್ಬರ, ಕೃತಕ ನೆರೆ

Flood @ Byndoor-1
ಮಳೆ ನೀರಿನಿಂದ ಮುಳುಗಡೆಯಾದ ರಸ್ತೆ.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಸೋಮವಾರವೂ ಮುಂದುವರಿದಿದ್ದು, ಹಲವೆಡೆ ಕೃತಕ ನೆರೆ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ವಿವಿಧೆಡೆ ಗುಡ್ಡ ಕುಸಿತವಾಗಿರುವುದರಿಂದ ಎಚ್ಚರಿಕೆ ವಹಿಸುವಂತೆ ತಹಸೀಲ್ದಾರ್ ಹಾಗೂ ಪೊಲೀಸರು ಸೂಚನೆ ನೀಡಿದ್ದಾರೆ.

ಕೊಚ್ಚಿಹೋದ ಸೇತುವೆ: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಳಜಿತ ಗ್ರಾಮದ ಸಾತೇರಿ ಸೇತುವೆಯು ನದಿ ಮೇಲೆ ಪ್ರವಾಹ ಉಕ್ಕಿ ಹರಿದಿದೆ. ಕಳವಾಡಿ, ತಗ್ಗರ್ಸೆ, ಮಯ್ಯಡಿ ಮುಂತಾದ ಕಡೆಗಳಲ್ಲಿ ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಉಪ್ಪುಂದ ಹೊಳೆಬಾಗಿಲು ಬೈಲ್‌ಮನೆ ಮಾಚಿ ನಾಗ ದೇವಾಡಿಗ ಎಂಬುವರ ಕೊಟ್ಟಿಗೆಯ ಮೇಲ್ಛಾವಣೆ ಗಾಳಿಗೆ ಹಾರಿಹೋಗಿದ್ದು, ಶಿರೂರಿನ ಪೇಟೆತೊಪ್ಪಲು ರಾಯರಹಿತ್ತು ನಾಗಪ್ಪ ಮೊಗೇರ್ ಎಂಬುವರ ಮನೆಯ ಮೇಲೆ ಮರ ಉರುಳಿದೆ. ಹೇರಂಜಾಲು ಭಾಗದಲ್ಲಿ ನೆರೆ ಸೃಷ್ಟಿಯಾಗಿದೆ.

ಬೈಂದೂರು ಪಟ್ಟಣ ಪಂಚಾಯಿತಿ ವತಿಯಿಂದ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದ್ದು, ಯಡ್ತರೆ ಬಂಟರ ಭವನದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್ ಮಾಹಿತಿ ನೀಡಿದ್ದಾರೆ. ನ್ಯಾಯಾಲಯ ಆವರಣ ಜಲಾವೃತ: ಬೈಂದೂರು-ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ಜೆಎಂಎಫ್‌ಸಿ ನ್ಯಾಯಾಲಯ ಆವರಣ ಜಲಾವೃತಗೊಂಡಿದೆ. ಬೈಂದೂರಿನ ತಾಲೂಕು ಆಡಳಿತ ಕಚೇರಿ ಹತ್ತಿರ ನ್ಯಾಯಾಲಯ ಸಂಕೀರ್ಣಕ್ಕಾಗಿ ಎರಡು ಎಕರೆ ಜಾಗ ಈಗಾಗಲೇ ಮೀಸಲಿಟ್ಟಿದ್ದು, ಅನುದಾನ ಬಿಡುಗಡೆಯಾಗದೇ ಇದ್ದಿದ್ದರಿಂದ ಶಾಶ್ವತ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮರೀಚಿಕೆಯಾಗಿದೆ. ಶೀಘ್ರವೇ ಈ ಕಾರ್ಯವಾಗಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ. ಆಗ್ರಹಿಸಿದ್ದಾರೆ.

ಶಾಸಕರ ನಿವಾಸದಲ್ಲಿ ಸಂತ್ರಸ್ತರಿಗೆ ಆಶ್ರಯ

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕರ್ತರ ಜತೆಗೆ ನೆರೆಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ್ದು, ಸಂತ್ರಸ್ತರ ರಕ್ಷಣೆ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಜಲಾವೃತದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ದೋಣಿ ಮೂಲಕ ಆಹಾರ ಸಾಮಗ್ರಿಗಳನ್ನು ಶಾಸಕರು ಪೂರೈಸುತ್ತಿದ್ದು, ತಮ್ಮ ನಿವಾಸದಲ್ಲಿಯೇ ಹಲವು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net