ಶಿರಸಿ ಸುತ್ತ ಭರ್ಜರಿ ಮಳೆ, ಶಾಲಾ ಕೊಠಡಿಗಳಿಗೆ ಹಾನಿ

26sirsi2-RAIN
Published on

ಶಿರಸಿ: ತಾಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಭರ್ಜರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಬುಧವಾರ ಸಂಜೆಯವರೆಗೂ ಮಳೆ ಮುಂದುವರಿದಿದ್ದು, ಕೆಲವೆಡೆ ಅವಘಡಗಳು ಸಂಭವಿಸಿವೆ.
ತಾಲೂಕಿನ ಹೆಗಡೆಕಟ್ಟಾ ಹೋಬಳಿ ವ್ಯಾಪ್ತಿಯ ಶಿವಳ್ಳಿ ಸಮೀಪದ ಪಂಚಲಿಂಗ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ಮೇಲೆ ಮಂಗಳವಾರ ರಾತ್ರಿ ಮರ ಬಿದ್ದಿದೆ. ಇದರಿಂದಾಗಿ 500 ಹೆಂಚುಗಳು, 300 ಅಡಿ ರೀಪು, ನಾಲ್ಕು ಪಕಾಸುಗಳು ಮುರಿದಿವೆ.
ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಜಗಿಮನೆಯಲ್ಲಿ ಮಹಾಬಲೇಶ್ವರ ಪುಟ್ಟಾ ನಾಯ್ಕ ಅವರ ನಿರ್ಮಾಣ ಹಂತದಲ್ಲಿರುವ ಮನೆ ಮತ್ತು ವಾಸ್ತವ್ಯದ ಶೆಡ್ ಮೇಲೆ ಮರ ಬಿದ್ದಿದೆ. ಇಸಳೂರು ಗ್ರಾಮದ ಲಲಿತಾ ಎಸ್.ಕೆ. ಅವರ ಮನೆಯ ಮೇಲೆ ಮರ ಬಿದ್ದಿದೆ. ಗಾಳಿ- ಮಳೆಯಿಂದಾಗಿ ತಾಲೂಕಿನ ಹಲವೆಡೆ ವಿದ್ಯುತ್ ತಂತಿಯ ಮೇಲೆ ಮರಗಳು ಮುರಿದು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇಲ್ಲಿಯ ಅಮ್ಮಿನಳ್ಳಿ ಬಳಿ ಮರ ಬಿದ್ದ ಕಾರಣ ವಿದ್ಯುತ್ ತಂತಿ ತುಂಡಾಗಿದೆ ಹಾಗೂ ವಿದ್ಯುತ್ ಕಂಬಗಳು ಮುರಿದು ಹಾನಿ ಉಂಟಾಗಿದೆ.
ಮಳೆಯಿಂದಾಗಿ ತಾಲೂಕಿನ ಹಳ್ಳ- ಕೊಳ್ಳಗಳಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿದೆ. ಬನವಾಸಿ ಸಮೀಪದ ವರದಾ ನದಿಯಲ್ಲಿ ಮತ್ತೆ ನೀರು ಹರಿಯಲಾರಂಭಿಸಿದೆ. ಶಿವಮೊಗ್ಗ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾದಲ್ಲಿ ವರದೆಯ ನೀರು ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net