ಭಾರಿ ಮಳೆಗೆ ಕೊಚ್ಚಿ ಹೋಯ್ತು ಮೋರಿ ಬದು

road-1
ಕಾಂತಾವರ ತೀರ್ಥಪದವು ಸೆಂಟ್ಸ್ ಕಾಲನಿ ರಸ್ತೆಯೂ ಮಳೆಗೆ ಹಾನಿಯಾಗಿರುವುದು
Published on

ಕಾರ್ಕಳ: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಬೋಳ ಗ್ರಾಮದ ಬಡಕೈಬೆಟ್ಟು ನಿವಾಸಿ ಅಶೋಕ ಶೆಟ್ಟಿ, ದಯಾನಂದ ಶೆಟ್ಟಿಯವರ ಭತ್ತದ ಗದ್ದೆಗೆ ಶಾಂಭವಿ ನದಿ ನೀರು ನುಗ್ಗಿ ನಷ್ಟ ಉಂಟಾಗಿದೆ. ಬೇಲಾಡಿ ವಂಜರಕಟ್ಟೆ ಸಂಪರ್ಕ ರಸ್ತೆಯಲ್ಲಿ ಅಳವಡಿಸಿರುವ ಹೊಳೆಬದಿ ಮೋರಿ ಬದುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಗ್ರಾಮಸ್ಥರು, ಶಾಲಾ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಕಾಂತಾವರ ಗ್ರಾಮದ ಮದಕ-ಪಾಲಡ್ಕ ಸಂಪರ್ಕ ರಸ್ತೆ, ಕಾಂತಾವರ ತೀರ್ಥಪದವು ಸೆಂಟ್ಸ್ ಕಾಲನಿ ರಸ್ತೆಗೆ ಹಾನಿಯುಂಟಾಗಿದೆ.

ಸಾಣೂರು ಗ್ರಾಮದ ರಾಧಾ ಜಿ ಪ್ರಭುರವರ ಮನೆಗೆ ಮಳೆ ನೀರು ನುಗ್ಗಿ ಮನೆ ಗೋಡೆ ಭಾಗಶಃ ಹಾನಿಯಾಗಿದೆ. ಕಾರ್ಕಳ ಗ್ರಾಮ ಕಾವೇರ್ಡಕ ಸೇತುವೆಗೆ ಮರ ಸಿಕ್ಕಿಹಾಕಿಕೊಂಡು ಸೇತುವೆಗೆ ಹಾನಿಯಾಗುವ ಸಾಧ್ಯತೆಗಳಿವೆ. ಸಾಣೂರು ಗ್ರಾಮದ ಮಸೀದಿ ಬಳಿಯ ನಿವಾಸಿ ಮೋಹನ್ ಶೆಟ್ಟಿ ಮನೆ ಮೇಲ್ಛಾವಣಿ, ಎರ್ಲಪಾಡಿ ಗ್ರಾಮದ ಶಾರದಾ ಪೂಜಾರಿ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಗೆ ಹಾನಿಯಾಗಿದೆ.
ಬೋಳ ಗ್ರಾಮದ ಮಾರಗುತ್ತು ನಿವಾಸಿ ಕುಮುದ ಶೆಟ್ಟಿ, ಸಂಪ ಶೆಟ್ಟಿ, ಸುಭಾಷ್ ಶೆಟ್ಟಿ, ಸಂಜೀವ ಶೆಟ್ಟಿ ಮನೆಗೆ ನದಿ ನೀರು ನುಗ್ಗಿದೆ. ಕಾರ್ಕಳ ನಗರದ ಕೋರ್ಟ್ ಬಳಿ ಮರ ಬಿದ್ದು ಮೂರು ಗೂಡಂಗಡಿಗಳಿಗೆ ಹಾನಿಯಾಗಿದೆ. ಇರ್ವತ್ತೂರು ಗ್ರಾಮದ ಚಂದ್ರರಾಜ್ ಅತಿಕಾರಿ ತೋಟಕ್ಕೆ ಮಳೆ ನೀರು ನುಗ್ಗಿ ಅಡಕೆ ಮರಗಳ ಸಹಿತ ಕೃಷಿ ಭೂಮಿಗೆ ಅಪಾರ ಹಾನಿಯಾಗಿದೆ. ಸದಾನಂದ ಪೂಜಾರಿ ತೋಟಕ್ಕೆ ಸಂಪರ್ಕಿಸುವ ರಸ್ತೆ ಮಳೆಯ ನೆರೆ ನೀರಿಗೆ ಕೊಚ್ಚಿ ಹೋಗಿ ರಸ್ತೆಯ ಸಂಪರ್ಕ ಕಡಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net