ಪೊಸ್ರಾಲು ಸೇತುವೆಯಲ್ಲಿ ಅವಘಡಗಳೇ ಅಧಿಕ, ರಸ್ತೆ ವಿಸ್ತರಣೆಗೆ ಹಲವು ಬಾರಿ ಮನವಿ, ಜನಪ್ರತಿನಿಧಿಗಳು, ಅಧಿಕಾರಿಗಳ ಪ್ರತಿಕ್ರಿಯೆ ಶೂನ್ಯ

posral
ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಕಿರು ಸೇತುವೆ
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮುಂಡ್ಕೂರು ಗ್ರಾಮದ ಪೇರೂರು ಪೊಸ್ರಾಲು ಬಳಿಯ ಸೇತುವೆ ಅಗಲ ಕಿರಿದಾಗಿದ್ದು, ರಸ್ತೆಯೂ ಸಣ್ಣದಾಗಿದೆ. ಇದು ದಿನನಿತ್ಯ ಒಂದಿಲ್ಲೊಂದು ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಭಾಗದಲ್ಲಿ ವಾಹನಗಳು ಅತಿ ವೇಗದಿಂದ ಸಂಚರಿಸುತ್ತಿದ್ದು, ಅಪಘಾತ ಸಂಭವಿಸುತ್ತಿದೆ. ಏಕಕಾಲಕ್ಕೆ ಎರಡೂ ಬದಿ ವಾಹನಗಳು ಚಲಿಸುವುದು ಕಷ್ಟವಾಗಿದೆ. ಭಾರಿ ವಾಹನಗಳು ಬಂದಾಗಂತೂ ಸಣ್ಣ ವಾಹನಗಳು ಸೈಡ್ ಕೊಡಲು ಹೋಗಿ ರಸ್ತೆಗೆ ಬಿದ್ದಿದ್ದಾರೆ. ಸೇತುವೆ ವಿಸ್ತರಿಸುವಂತೆ ವರ್ಷಗಳಿಂದ ಗ್ರಾಮಸ್ಥರು ಒತ್ತಾಯಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

ಅಪಾಯಕಾರಿ ರಸ್ತೆ

ಮುಂಡ್ಕೂರಿನ ಜಾರಿಗೆಕಟ್ಟೆಯಿಂದ ಮೂಡುಬಿದಿರೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ನೂರಾರು ವಾಹನಗಳು ಇದೇ ಮಾರ್ಗವಾಗಿ ಓಡಾಡುತ್ತವೆ. ಪೆರೂರು ಬಳಿಯಿಂದ ಈ ರಸ್ತೆ ಇಳಿಜಾರು ಹೊಂದಿದ್ದು, ಕಿರಿದಾಗಿರುವ ಕಾರಣ ಇಲ್ಲಿ ಅಪಘಾತ ಸರ್ವೇ ಸಾಮಾನ್ಯ. ಕಿರುಸೇತುವೆ ಪಕ್ಕದಲ್ಲೇ ಬೃಹತ್ ಹೊಂಡವಿದ್ದು, ದಿನಕ್ಕೆ ಕನಿಷ್ಠ ಒಂದೆರಡು ದ್ವಿಚಕ್ರ ವಾಹನ ಇದಕ್ಕೆ ಬೀಳುವುದು ಮಾಮೂಲಾಗಿದೆ.

ವಿಸ್ತರಣೆಗೆ ಬೇಡಿಕೆ

ಹಲವು ಬಾರಿ ಕಿರು ಸೇತುವೆ ವಿಸ್ತರಿಸುವಂತೆ ಮನವಿ ಮಾಡಿದ್ದರಿಂದ ಸೇತುವೆಯ ಮೋರಿಯನ್ನು ಕೊಂಚ ವಿಸ್ತರಿಸಲಾಯಿತು. ಆದರೆ ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು, ಸೇತುವೆ ರಸ್ತೆಯನ್ನು ಮತ್ತಷ್ಟು ವಿಸ್ತರಿಸಿ ಅವಘಡ ತಡೆಯಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಪ್ರವಾಸಿ ವಾಹನಗಳೇ ಅಧಿಕ

ಉಡುಪಿಯ ಕೃಷ್ಣ ಮಠ, ಕಟೀಲು ದೇವಾಲಯವನ್ನು ಸಂದರ್ಶಿಸಿ ಬಳಿಕ ಹೊಸನಾಡು, ಕೊಡ್ಯಡ್ಕ, ಧರ್ಮಸ್ಥಳ, ಸುಬ್ರಹ್ಮಣ್ಯ ದೇವಳಗಳ ಸಂಪರ್ಕಿಸಲು ಇದೇ ರಸ್ತೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಪ್ರವಾಸಿಗರೇ ಸಂಚರಿಸುತ್ತಿದ್ದು, ಈ ದಾರಿಯ ಬಗ್ಗೆ ಹೊಸಬರಿಗೆ ಹೆಚ್ಚು ತಿಳಿಯದಿರುವುದರಿಂದ ಅಪಘಾತ ಸಂಭವಿಸುತ್ತಿದೆ.

ಈ ಹಿಂದೊಮ್ಮೆ ಇಲಾಖೆಗೆ ಮನವಿ ಮಾಡಲಾಗಿದೆ. ಹಾಗಾಗಿ ಮೋರಿಯನ್ನು ಸ್ವಲ್ಪ ವಿಸ್ತರಿಸಿದ್ದಾರೆ. ರಸ್ತೆಯ ಎರಡೂ ಬದಿ ಖಾಸಗಿ ಜಾಗವಿದ್ದು, ವಿಸ್ತರಣೆಗೆ ಸಮಸ್ಯೆಯಾಗಿದೆ. ಮತ್ತೊಮ್ಮೆ ಇಲಾಖೆ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ.-ದೇವಪ್ಪ ಸಫಲಿಗ, ಅಧ್ಯಕ್ಷ, ಮುಂಡ್ಕೂರು ಗ್ರಾಪಂ

ಕಿರು ಸೇತುವೆ ಹಾಗೂ ರಸ್ತೆ ಹೊಂಡದಿಂದ ವಾಹನ ಸವಾರರು ನಿತ್ಯ ಅವಘಡಗಳಿಗೆ ತುತ್ತಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಿರು ಸೇತುವೆ ಸಹಿತ ರಸ್ತೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು.-ಸುಧಾಕರ್, ವಾಹನ ಸವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net