More

    ಬಿಗಡಾಯಿಸಿದೆ ಡ್ರೆಜ್ಜಿಂಗ್ ಸಮಸ್ಯೆ, ಅಧಿಕಾರಿಗಳ ಅವ್ಯವಹಾರ ಆರೋಪ, ಮೀನುಗಾರರಿಗೆ ಸಂಕಷ್ಟ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಅಳಿವೆಯಲ್ಲಿ ಹೂಳೆತ್ತುವ ಕೆಲಸ ಆದ ಬಳಿಕ ಅಳಿವೆ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಹೂಳೆತ್ತುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸುಮಾರು 4.6 ಕೋಟಿ ರೂ. ವೆಚ್ಚದಲ್ಲಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನವೆಂಬರ್‌ನಲ್ಲಿ ಆರಂಭಗೊಂಡಿದ್ದು, ಡ್ರೆಜ್ಜಿಂಗ್ ಕಾಮಗಾರಿ ನಡೆಸಲು ಸುಮಾರು ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ ಡ್ರೆಜ್ಜಿಂಗ್ ಆರಂಭಿಸಿದ ಒಂದೇ ತಿಂಗಳಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಕಾಮಗಾರಿ ಮುಗಿದಿದೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಮಾಡುವ ಗೋಜಿಗೆ ಹೋಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ತಿಂಗಳಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಮುಗಿಸಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬರುತ್ತಿದೆ.

    ಅನಾಹುತಕ್ಕೆ ಕಾರಣ

    ಮೀನುಗಾರರ ನಿರೀಕ್ಷೆಗೆ ತಕ್ಕಂತೆ ಡ್ರೆಜ್ಜಿಂಗ್ ಕಾಮಗಾರಿ ನಡೆದಿಲ್ಲ. ಗಂಗೊಳ್ಳಿ ಬಂದರಿಗೆ ಬರುವ ದಾರಿಯಲ್ಲಿ ಡ್ರೆಜ್ಜಿಂಗ್ ಮಾಡುವುದು ಬಿಟ್ಟು ಕೋಡಿಗೆ ಹೋಗುವ ದಾರಿಯಲ್ಲಿ ಡ್ರೆಜ್ಜಿಂಗ್ ಮಾಡಲಾಗಿದೆ ಎಂಬ ಆರೋಪ ಮೀನುಗಾರರಿಂದ ಕೇಳಿ ಬರುತ್ತಿದೆ. ಗಂಗೊಳ್ಳಿ ಅಳಿವೆಯಲ್ಲಿ ಹಿಟಾಚಿ ಮೂಲಕ ಹೂಳೆತ್ತಿ ತೆಗೆದ ಹೂಳನ್ನು ಬಾರ್ಜ್ ಮೂಲಕ ಅಳಿವೆಯಿಂದ ಸ್ವಲ್ಪ ದೂರದಲ್ಲೇ ಹಾಕಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಅಳಿವೆಯಲ್ಲಿ ತೆಗೆದ ಹೂಳನ್ನು ಗಂಗೊಳ್ಳಿ ಬಂದರಿಗೆ ಬರುವ ದಾರಿಯುದ್ದಕ್ಕೂ ಹಾಕುತ್ತಾ ಹೋಗಿರುವುದರಿಂದ ಅಲ್ಲಲ್ಲಿ ಮರಳು ದಿಬ್ಬ ಸೃಷ್ಟಿಯಾಗಿದೆ. ಇದರಿಂದ ಪರ್ಸಿನ್ ಮತ್ತು ಫಿಶಿಂಗ್ ಬೋಟ್‌ಗಳು ಹಾಗೂ ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಕಷ್ಟವಾಗುತ್ತಿದ್ದು, ಅಳಿವೆಯಲ್ಲಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ.

    ಮೀನುಗಾರರ ಅಳಲು

    ಗಂಗೊಳ್ಳಿ ಬಂದರಿನಲ್ಲಿ ಸುಮಾರು 100ಕ್ಕೂ ಮಿಕ್ಕಿ ಫಿಶಿಂಗ್ ಬೋಟ್ ಸೇರಿದಂತೆ 400ಕ್ಕೂ ಮಿಕ್ಕಿ ಬೋಟ್ ಹಾಗೂ 25ಕ್ಕೂ ಮಿಕ್ಕಿ ಆಳ ಸಮುದ್ರ ಬೋಟ್‌ಗಳು ಕಾರ್ಯಾಚರಿಸುತ್ತಿದೆ. ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಿಲೂ ಅಳಿವೆ ಹೂಳೆತ್ತಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಈ ಬಾರಿ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನಡೆದು ಮೀನುಗಾರರು ನೆಮ್ಮದಿಯಲ್ಲಿ ಇರಬಹುದು ಎಂದೆಣಿಸಿಕೊಂಡಿದ್ದರೂ ಇದೀಗ ಅಳಿವೆಯಲ್ಲಿ ಮತ್ತಷ್ಟು ಬಿಗಡಾಯಿಸಿದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.
    ಗಂಗೊಳ್ಳಿ ಬಂದರು ಪ್ರವೇಶಿಸುವ ದಾರಿಯಲ್ಲಿ ಮರಳು ದಿಬ್ಬ ನಿರ್ಮಾಣಗೊಂಡಿದ್ದು, ಬೋಟ್ ಮತ್ತು ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಹಾಗೂ ಬಂದರಿನಿಂದ ಹೊರಗೋಗಲು ಹರಸಾಹಸ ಪಡುವಂತಾಗಿದೆ. ಸಮುದ್ರದ ಅಲೆಗಳ ಇಳಿತದ ಸಮಯದಲ್ಲಿ ಬೋಟ್‌ಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಕೊಂಚ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ.

    ಅಸಮರ್ಪಕ ಕಾಮಗಾರಿ

    ಅಳಿವೆ ಹೂಳೆತ್ತುವ ಕಾಮಗಾರಿ ನಡೆಸಿ ತೆಗೆದ ಹೂಳನ್ನು ಅನತಿ ದೂರದಲ್ಲೇ ಹಾಕಿರುವುದು ಮತ್ತು ಗಂಗೊಳ್ಳಿ ಬಂದರು ಪ್ರವೇಶಿಸುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸದಿರುವುದು ಮೀನುಗರರ ನಿದ್ದೆಗೆಡಿಸಿದೆ. ಡ್ರೆಜ್ಜಿಂಗ್ ಮಾಡುವುದೇ ಬೇಡವಾಗಿತ್ತು ಎಂಬ ಮಾತು ಮೀನುಗಾರರ ವಲಯದಲ್ಲಿ ಕೇಳಿ ಬರುತ್ತಿದೆ. ಬಂದರು ಮತ್ತು ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಸಮಸ್ಯೆ ಬಗ್ಗೆ ಹೇಳಿಕೆ ನೀಡಲು ನುಣುಚಿಕೊಳ್ಳುತ್ತಿದ್ದು, ಇದು ನಮಗೆ ಸಂಬಂಧಪಟ್ಟಿದ್ದಲ್ಲ ಎಂದು ಇನ್ನೊಬ್ಬ ಅಧಿಕಾರಿಯತ್ತ, ಇಂಜಿನಿಯರ್‌ಗಳತ್ತ ಬೊಟ್ಟು ಮಾಡುತ್ತಿರುವುದು ವಿಪರ್ಯಾಸ. ಒಟ್ಟಿನಲ್ಲಿ ಅಳಿವೆ ಪ್ರದೇಶದ ಹೂಳೆತ್ತಲು ಕಾಮಗಾರಿಯಿಂದ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಿದ್ದು, ಮೀನುಗಾರರ ನೆಮ್ಮದಿ ಹಾಳು ಮಾಡಿದೆ.

    ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಿಲೂ ಅಳಿವೆ ಹೂಳೆತ್ತಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಈ ಬಾರಿ ಕಾಮಗಾರಿ ನಡೆದು ಮೀನುಗಾರರು ನೆಮ್ಮದಿಯಲ್ಲಿ ಇರಬಹುದು ಎಂದೆಣಿಸಿದ್ದರೂ ಇದೀಗ ಅಳಿವೆಯಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಅಳಿವೆ ಹೂಳೆತ್ತುವ ಕಾಮಗಾರಿ ನಡೆಸಿ ತೆಗೆದ ಹೂಳನ್ನು ಅಳಿವೆಯಿಂದ ಅನತಿ ದೂರದಲ್ಲಿ ಹಾಕಿರುವುದು ಮತ್ತು ಗಂಗೊಳ್ಳಿ ಬಂದರು ಪ್ರವೇಶಿಸುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸದಿರುವುದರಿಂದ ಸಮಸ್ಯೆ ಹೆಚ್ಚಾಗಿದೆ.
    -ಆನಂದ, ಸ್ಥಳೀಯ ಮೀನುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts