

ವಿಜಯವಾಣಿ ಸುದ್ದಿಜಾಲ ಬೈಂದೂರು
ಯಕ್ಷಗಾನ ಪರಿಪೂರ್ಣ ಕಲೆಯಾಗಿದ್ದು, ಇದು ಆರಾಧನಾ ಕಲೆಯಾಗಿ ಜನರ ಮನದಲ್ಲಿ ನೆಲೆ ನಿಂತಿದೆ. ಮಕ್ಕಳು ಸಮೂಹ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಉಳ್ಳೂರು ಮೂಡುಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಗೋಪಾಲಕೃಷ್ಣ ಕಲಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಅಶ್ವತ್ಥ ಪ್ರತಿಷ್ಠೋಪನಯನ, ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದ ಶಂಕರ ದೇವಾಡಿಗ ಮಾತನಾಡಿ, ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಯಕ್ಷಗಾನ ಕಲೆ ಉಳಿಸಲು ಸಣ್ಣ ಪ್ರಯತ್ನ ಮಾಡಿದ್ದಾರೆ. ಎಲ್ಲ ಕಡೆಗೂ ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ರವೀಂದ್ರ ಉಡುಪ ಮೂಡುಮಠ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ಸೂಲಿಯಣ್ಣ ಶೆಟ್ಟಿ, ಸೀತಾರಾಮ ಶೆಟ್ಟಿ ಉದ್ದಿನಹಕ್ಕಲು, ಪ್ರಗತಿಪರ ಕೃಷಿಕ ಭುಜಂಗ ಶೆಟ್ಟಿ ಕುಕನಾಡು, ನಾಗರಾಜ್ ಪೂಜಾರಿ ಪಡುಮನೆ, ಸುರೇಶ ದೇವಾಡಿಗ ಹಾಡಿಮನೆ ಮೊದಲಾದವರು ಉಪಸ್ಥಿತರಿದ್ದರು. ಅರುಣ್ ಗಾಣಿಗ ಸ್ವಾಗತಿಸಿ, ಭಾಸ್ಕರ ದೇವಾಡಿಗ ವಂದಿಸಿದರು. ನಂತರ ಕಲಾ ತಂಡದ ಸದಸ್ಯರಿಂದ ಶಂಕರ ದೇವಾಡಿಗ ಹಾಗೂ ದಿನೇಶ್ ಆಚಾರ್ಯ ನಿರ್ದೇಶನದಲ್ಲಿ ‘ರಾಜಾ ರುದ್ರಕೋಪ’ ಯಕ್ಷಗಾನ ಪ್ರದರ್ಶನಗೊಂಡಿತು.
ಯಕ್ಷಗಾನ ಗುರು ಶಂಕರ ದೇವಾಡಿಗ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕಲಾವೇದಿಕೆ ನವೀಕರಣಕ್ಕೆ ಧನ ಸಹಾಯ ಮಾಡಿದ ಗಣೇಶ ದೇವಾಡಿಗ ಹಾಡಿಮನೆ ದಂಪತಿ, ಅನ್ನಸಂತರ್ಪಣೆ ಸೇವೆ ಮಾಡಿದ ಸದಾಶಿವ ದೇವಾಡಿಗ ಲಿಂಗಿಮನೆ ಅವರನ್ನು ಗೌರವಿಸಲಾಯಿತು.