

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಶಾಖದ ಅಲೆ(ಹೀಟ್ವೇವ್) ಮುಂದುವರಿದಿದೆ. ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡದಲ್ಲಿ ಮಾ.2ರಿಂದ ಮುಂದಿನ 2 ದಿನ ಬಿಸಿಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.
ರಾಜ್ಯದ ಇತರೆ ಜಿಲ್ಲೆಗಳಗಿಂತ ಕಾರವಾರ 38.2, ಗೋಕರ್ಣ 38.2, ಹೊನ್ನಾವರ 37.8 ಡಿ.ಸೆ. ಉಷ್ಣಾಂಶ ಶನಿವಾರ ದಾಖಲಾಗಿದೆ. ಅಲ್ಲದೆ, ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಸರಾಸರಿ 4-5 ಡಿ.ಸೆ.ಅಧಿಕವಾಗಿ ಉಷ್ಣಾಂಶ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿದೆ. ಬಿಸಿಲಿನ ಪ್ರಖರತೆ ಹೆಚ್ಚಿದ ಸಂದರ್ಭದಲ್ಲಿ ಶಿಶುಗಳು, ವೃದ್ಧರು, ದೀರ್ಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಹೊರಗಡೆ ತೆರಳವುದನ್ನು ತಪ್ಪಿಸಬೇಕು ಎಂದು ಇಲಾಖೆ ಸಲಹೆ ನೀಡಿದೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗರಿಷ್ಠ, ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಮೈಸೂರಿನಲ್ಲಿ ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 1-2 ಡಿ.ಸೆ. ಉಷ್ಣಾಂಶ ಏರಿಕೆಯಾಗಿದೆ.
ರಾಜ್ಯದ ಶೇ.80 ಭೌಗೋಳಿಕ ಪ್ರದೇಶದಲ್ಲಿ ಗರಿಷ್ಠ ತಾಪಮಾನದಲ್ಲಿ 34 ಡಿ.ಸೆ.ನಿಂದ 38 ಡಿ.ಸೆ.ವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ಕನಿಷ್ಠ ತಾಪಮಾನದಲ್ಲಿ 16 ಡಿ.ಸೆ.ನಿಂದ 20 ಡಿ.ಸೆ.ವರೆಗೆ ವರದಿಯಾಗುತ್ತಿದೆ. ಹಳೆಯ ಮೈಸೂರು ಭಾಗದ ಕೆಲ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ.
| ಸಿ.ಎಸ್.ಪಾಟೀಲ್. ಹವಾಮಾನ ಇಲಾಖೆ ನಿರ್ದೇಶಕ.