ಹೃದಯಾಘಾತಕ್ಕೆ ಪ್ರತಿಭಟನಾಕಾರನ ಸಾವು

FotoJet (2)
Published on

ದಸಂಸ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಮಾಚಾವಲಹಳ್ಳಿ ನರಸಿಂಹಪ್ಪ ಮೃತ

ಗುಡಿಬಂಡೆ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಉಲ್ಲೋಡು ಗ್ರಾಪಂ ವ್ಯಾಪ್ತಿಯ ಮಾಚಾವಲಹಳ್ಳಿಯ ನರಸಿಂಹಪ್ಪ (65) ಮೃತ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ನರಸಿಂಹಪ್ಪ ಉಚಿತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ದಲಿತ ಸಂಘಟನೆ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. *** ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತವಾಗಿದ್ದು, ಕೂಡಲೇ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್‌ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

5ನೇ ದಿನವೂ ಮುಂದುವರಿದ ಧರಣಿ

ನಿವೇಶನ, ಭೂಮಿ ಮಂಜೂರು, ದಲಿತರ ಮೇಲಿನ ದೌರ್ಜನ್ಯ, ಮೂಲಸೌಕರ್ಯ ಪೂರೈಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ದಸಂಸ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ 5ನೇ ದಿನವೂ ಮುಂದುವರಿಯಿತು. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ದಸಂಸ ಖಜಾಂಚಿ ಜಿ.ವಿ.ಗಂಗಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net