ಅಳಗವಾಡಿಯಲ್ಲಿ ಗ್ರಾಮ ಆರೋಗ್ಯ ತರಬೇತಿ: ಕ್ಷಯಮುಕ್ತ ಜಿಲ್ಲೆಗೆ ಸಲಹೆ

221
Published on

ಸಿರಿಗೆರೆ: ಗ್ರಾಮೀಣ ಭಾಗಗಳಲ್ಲಿ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ರೋಗಿಗಳನ್ನು ಪತ್ತೆ ಹಚ್ಚಿ ತುರ್ತಾಗಿ ಚಿಕಿತ್ಸೆ ನೀಡಿದರೆ ಕ್ಷಯಮುಕ್ತ ಜಿಲ್ಲೆಯಾಗಿಸಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹೇಳಿದರು.

ಇಲ್ಲಿನ ಅಳಗವಾಡಿ ಗ್ರಾಪಂ ಆವರಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.

ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಮ್ ಟ್ರಿಬರ್ಕ್ಯುಲೋಸಿಸ್ ಎಂಬ ಸೂಕ್ಷ್ಮಾಣು ಜೀವಿಯಿಂದ ಗಾಳಿಯ ಮೂಲಕ ಹರಡುತ್ತದೆ. ಇದೊಂದು ಸಾಂಕ್ರಾಮಿಕ ರೋಗ. ಚಿಕಿತ್ಸೆ ಪಡೆಯದ ಕ್ಷಯ ರೋಗಿಯು ಕೆಮ್ಮುವುದು, ಸೀನುವುದರಿಂದ ತುಂತುರು ಹನಿ ಗಾಳಿಯ ಮುಖಾಂತರ ಸಂಪರ್ಕಿತರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹರಡುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಸಹಿತ ಕಫ, ಸಂಜೆ ವೇಳೆ ಜ್ವರ, ತೂಕ ಕಡಿಮೆ, ಹಸಿವಾಗದೆ ಇರುವುದು ಈ ರೋಗದ ಲಕ್ಷಣವಾಗಿದೆ ಎಂದು ತಿಳಿಸಿದರು.

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗ ಪತ್ತೆ ಹಚ್ಚಿ, ಉಚಿತ ಚಿಕಿತ್ಸೆ ನೀಡಲಾಗುವುದು. ದೃಢಪಟ್ಟ ರೋಗಿಗೆ ಚಿಕಿತ್ಸೆಯನ್ನು ಮನೆ ಬಾಗಿಲಿಗೆ ಸರ್ಕಾರ ಒದಗಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಚಿಕಿತ್ಸಾ ಅವಧಿಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ 500 ರೂ.ಗಳನ್ನು ಡಿಬಿಟಿ ಮುಖಾಂತರ ನೇರವಾಗಿ ಕ್ಷಯರೋಗಿಯ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ ಎಂದರು.

ನವೆಂಬರ್ ತಿಂಗಳಿನಿಂದ ಹೊಸದಾಗಿ ಚಿಕಿತ್ಸೆ ಪ್ರಾರಂಭಿಸಿದ ರೋಗಿಗಳಿಗೆ ಮೊದಲ ಕಂತಿನಲ್ಲಿ 3000 ರೂ., 84 ದಿನಗಳ ನಂತರ 2ನೇ ಕಂತಾಗಿ 3000 ರೂ. ಸೇರಿ ಒಟ್ಟು 6000 ರೂ. ಚಿಕಿತ್ಸಾ ಅವಧಿಯಲ್ಲಿ ರೋಗಿಯ ಬ್ಯಾಂಕ್ ಖಾತೆಗೆ ನೀಡಲಾಗುವುದು ಎಂದರು.

ಪೌಷ್ಟಿಕ ಆಹಾರಕ್ಕಾಗಿ ಸರ್ಕಾರ ಪ್ರೋತ್ಸಾಹಧನ ಒದಗಿಸುವುದು. ಕ್ಷಯ ರೋಗಕ್ಕೆ ನಿಗದಿತ ಚಿಕಿತ್ಸೆ ಲಭ್ಯ ಇರುವುದರಿಂದ ಯಾರೂ ಕೂಡ ಆತಂಕ ಪಡದೆ ಶೀಘ್ರವಾಗಿ ಪರೀಕ್ಷೆ ಮಾಡಿಸಿ ಸರಿಯಾದ ಚಿಕಿತ್ಸೆ ಪಡೆದು ಪೌಷ್ಟಿಕ ಆಹಾರ ಸೇವಿಸಿ ರೋಗ ಮುಕ್ತಗೊಳಿಸಲು ಶ್ರಮಿಸಬೇಕೆಂದರು.

ರೋಗಿಯ ಮನೆಯ ಸಂಪರ್ಕಗಳು ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆಯುವುದರಿಂದ ರೋಗ ಬಾರದಂತೆ ತಡೆಯಬಹುದು. ಅಸಾಂಕ್ರಾಮಿಕ ರೋಗಗಳು, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ರೋಗದ ಬಗ್ಗೆ ತರಬೇತಿ ನೀಡಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ, ಪಿಡಿಒ ಲಾಲ್ಯಾನಾಯ್ಕ, ಸರಸ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net